ಉಳ್ಳಾಲ (ಮಂಗಳೂರು): ಕರ್ನಾಟಕ-ಕೇರಳ ಗಡಿಭಾಗ ತೌಡುಗೋಳಿ ಸುತ್ತುಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಿರುವ ಚಿರತೆ ಮತ್ತೆ ಕಾಣಿಸಿಕೊಂಡಿದೆ.
ಶನಿವಾರ ಬೆಳಗ್ಗೆ ತೌಡುಗೋಳಿಯ ಅಂಗನವಾಡಿ ಬಳಿಯ ಕ್ರಶರ್ನ ಬೃಹತ್ ಬಂಡೆಕಲ್ಲಿನ ಮೇಲೆ ಚಿರತೆ ಮಲಗಿರುವುದನ್ನು ಸ್ಥಳೀಯ ಕೂಲಿ ಕಾರ್ಮಿಕರು ಕಂಡಿದ್ದಾರೆ. ಕ್ರಶರ್ ಕೆಲಸಕ್ಕೆಂದು ನಾಲ್ಕು ಮಂದಿ ಆ ದಾರಿಯಲ್ಲಿ ಸಾಗುತ್ತಿರುವಂತೆಯೇ ಒಬ್ಬಾತ ಬಂಡೆಕಲ್ಲಿನ ಮೇಲೆ ಚಿರತೆ ಮಲಗಿರುವುದನ್ನು ಗಮನಿಸಿದ್ದು, ಆತಂಕದಿಂದ ಇತರರಿಗೆ ಏರು ಧ್ವನಿಯಲ್ಲಿ ಹೇಳುತ್ತಿರುವಂತೆಯೇ ಜನರ ಪ್ರತಿಧ್ವನಿ ಕೇಳಿದ ತಕ್ಷಣ ಚಿರತೆ ನಿಧಾನಗತಿಯಲ್ಲಿ ದಟ್ಟ ಗುಡ್ಡದ ಬಳಿ ಸಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.