ಸುಳ್ಯ(ದಕ್ಷಿಣ ಕನ್ನಡ): ತಾಲೂಕಿನ ಕಲ್ಮಡ್ಕದಲ್ಲಿ ನಿವೇಶನ ಹಕ್ಕುಪತ್ರ ನೀಡದೇ ಸತಾಯಿಸಲಾಗುತ್ತಿದ್ದು, ಹಲವಾರು ನಿರ್ಗತಿಕ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಂತ್ರಸ್ತರು ಆರೋಪ ವ್ಯಕ್ತಪಡಿಸಿದ್ದಾರೆ.
ನಿವೇಶನ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷವೇ ಕಳೆದರೂ ಇನ್ನೂ ಹಕ್ಕುಪತ್ರಗಳು ಅರ್ಜಿದಾರರ ಕೈ ಸೇರಿಲ್ಲ ಎನ್ನಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಡಿ 19 ಕುಟುಂಬಗಳು ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿವೇಶನ ಗೊತ್ತು ಪಡಿಸಿದ್ರೂ ಹಕ್ಕುಪತ್ರ ವಿತರಣೆ ಆಗಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ವಸತಿ ಸಚಿವರನ್ನು ಭೇಟಿಯಾಗಿ ಮನವಿ ನೀಡಲಾಗಿತ್ತು. ಹಾಗೂ ಈ ಬಗ್ಗೆ ಪಂಚಾಯತ್ ನಿರ್ಣಯ ತೆಗೆದುಕೊಂಡು ಪತ್ರ ಬರೆದಿತ್ತು. ಆದರೆ, ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷವಿರುವ ಕಾರಣದಿಂದಾಗಿ ವಿಳಂಬ ಮಾಡಲಾಗುತ್ತದೆ ಎಂದು ಸಂತ್ರಸ್ತರು ತೀವ್ರ ಆರೋಪ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳ ಹಿಂದೆಯೇ ಅರ್ಜಿಗಳು ವಸತಿ ಸಚಿವರ ಕೈ ಸೇರಿವೆ. ಆದರೂ ಹಕ್ಕುಪತ್ರಕ್ಕೆ ಅನುಮೋದನೆ ನೀಡಿಲ್ಲ. ಅಷ್ಟೇಅಲ್ಲ ಸುಳ್ಯ ಶಾಸಕ ಎಸ್. ಅಂಗಾರ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಹಕ್ಕುಪತ್ರ ದೊರೆಯುತ್ತಿಲ್ಲ ಎಂದು ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಅವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆಗಾಗಿ ಈಟಿವಿ ಭಾರತ, ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಕರೆ ಮಾಡಿದರೆ ಅವರು ಫೋನ್ ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಒಟ್ಟಿನಲ್ಲಿ ಕೈ-ಕಮಲ ನಾಯಕರ ರಾಜಕೀಯ ಕೆಸರೆರಚಾಟದಲ್ಲಿ ಹಕ್ಕುಪತ್ರ ಸಿಗದೇ ತಾವು ಹೈರಾಣಾಗಿದ್ದೇವೆ ಎನ್ನುತ್ತಾರೆ ಅರ್ಜಿ ಸಲ್ಲಿಸಿದ ಸಾರ್ವಜನಿಕರು.