ಮಂಗಳೂರು : ನಗರದಲ್ಲಿ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್ ಅನ್ನು ಸ್ಥಾಪಿಸಲು ತುರ್ತು ಗಮನ ಹರಿಸಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದರು.
ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ವತಿಯಿಂದ ವೆನ್ಲಾಕ್ ಆಯುಷ್ ಆಸ್ಪತ್ರೆಯ ಆವರಣದಲ್ಲಿನ ರಾಷ್ಟ್ರೀಯ ಆಯುಷ್ ಮಿಷನ್ ಸಂಯುಕ್ತ ಆಯುಷ್ ಆಸ್ಪತ್ರೆಯನ್ನು ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಈ ಬಗ್ಗೆ ತಕ್ಷಣ ಸುಳ್ಳು ಭರವಸೆ ನೀಡುವುದಿಲ್ಲ. ಆದರೆ, ತುರ್ತು ಗಮನಹರಿಸಿ ಆಯುಷ್ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಅನ್ನು ತೆರೆಯಲು ಕೇಂದ್ರ ಆಯುಷ್ ಸಚಿವಾಲಯದ ಮೂಲಕ ಪ್ರಯತ್ನ ಪಡುವುದಾಗಿ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಜಂಟಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಜನರನ್ನು ಆರೋಗ್ಯವಂತರನ್ನಾಗಿ ಮಾಡುವುದು ಮುಖ್ಯವಾಗಿದೆ.
ವೈದ್ಯಕೀಯ ವೃತ್ತಿ ಶ್ರೇಷ್ಠವಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಗೌರವಯುತವಾಗಿ ನಡೆಸಿಕೊಂಡು ಆರೈಕೆ ಮಾಡಿದಾಗ ಮಾತ್ರ ರೋಗಿ ಶೀಘ್ರ ಗುಣಮುಖರಾಗಲು ಸಹಾಯವಾಗುತ್ತದೆ ಎಂದರು.
ಈ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಪಂಚಕರ್ಮ, ಜಪ, ಕಾರಸವ ಅಭ್ಯಂಗ ಮುಂತಾದ ಎಲ್ಲಾ ಚಿಕಿತ್ಸೆಗಳು ಲಭ್ಯವಾಗಲಿವೆ. ಆಯುಷ್ ಚಿಕಿತ್ಸೆ ನಿಸರ್ಗದಿಂದಲೇ ದೊರಕುವ ಗಿಡಮೂಲಿಕೆಗಳನ್ನು ಬಳಸಿಕೊಳ್ಳಲಾಗುತ್ತದೆ.
ದೇಶದಲ್ಲಿ ಪ್ರಾಚೀನ ಕಾಲದಿಂದ ಬಂದಿರುವ ಆಯರ್ವೇದ ವೈದ್ಯ ಪದ್ಧತಿಯನ್ನು ಮತ್ತೆ ಬಳಕೆ ಮಾಡಲು ಪ್ರಧಾನಿ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಅದರ ಪ್ರಯೋಜನವು ಜನರಿಗೆ ದೊರಕಬೇಕೆಂದು ಅಪೇಕ್ಷೆ ಪಟ್ಟು ಆಯುಷ್ ಸಚಿವಾಲಯಕ್ಕೆ ಒತ್ತು ನೀಡಿದ್ದಾರೆ ಎಂದರು.
ಈ ವೇಳೆ ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಎನ್ಎಂಪಿಟಿ ಅಧ್ಯಕ್ಷ ಎ ವಿ ರಮಣ್ ಮತ್ತಿರರು ಉಪಸ್ಥಿತರಿದ್ದರು.