ಮಂಗಳೂರು: ಅಡಕೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ಅಡಕೆಯ ಕನಿಷ್ಠ ಆಮದು ಬೆಲೆ(MIP)ಯನ್ನು ಈಗ ಇರುವ ಕೆಜಿಗೆ 251ರೂ ಗಳಿಂದ 351ರೂಪಾಯಿಗಳಿಗೆ ಪರಿಷ್ಕರಿಸಿ ಹೊರಡಿಸಿರುವ ಆದೇಶದಿಂದ ಅಡಕೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಇದರಿಂದ ಕೆಲವು ತಿಂಗಳುಗಳಿಂದ ಏರಿಳಿತದ ಮೂಲಕ ಮಾರುಕಟ್ಟೆಯಲ್ಲಿ ಇದ್ದ ಅಡಕೆಯ ದರ ಅನಿಶ್ಚಿತತೆಯು ಸರಿಯಾಗಲಿದೆ ಮತ್ತು ರೈತರಲ್ಲಿದ್ದ ಹತಾಶೆಯ ಭಾವನೆಯು ಹೋಗಲಿದೆ ಎಂದರು.
ಕೇಂದ್ರದ ಕ್ರಮದಿಂದಾಗಿ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಯ ಆಮದಿನ ಮೇಲೆ ಭಾರಿ ಹೊಡೆತ ಬೀಳಲಿದೆ. ಉತ್ತಮ ಗುಣಮಟ್ಟದ ದೇಶೀ ಅಡಕೆಗೆ ಬೇಡಿಕೆಯು ಬರಲಿದೆ ಮತ್ತು ದರದಲ್ಲಿ ಸ್ಥಿರತೆಯು ಕಾಣಲಿದೆ. ಇದರಿಂದಾಗಿ ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದೆ. ಅಡಿಕೆ ಬೆಳೆಗಾರರ ಹಿತ ರಕ್ಷಕ ಕ್ಯಾಂಪ್ಕೊ ಸಂಸ್ಥೆಯ ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಕ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರರವರ ನೇತೃತ್ವದಲ್ಲಿ ಕ್ಯಾಂಪ್ಕೊ, ಮ್ಯಾಮ್ಕೊಸ್, ಟಿಎಸ್ಎಸ್, ತುಮ್ಕೋಸ್, ಅಡಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತೀಯ ರಾಷ್ಟ್ರೀಯ ನಾಯಕರಾದ ರಮೇಶ್ ವೈದ್ಯ ಮುಂತಾದ ಸದಸ್ಯರನ್ನೊಳಗೊಂಡ ನಿಯೋಗವು ದೆಹಲಿಗೆ ತೆರಳಿ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿಯನ್ನು ಮಾಡಿತ್ತು. ನಂತರದ ದಿನಗಳಲ್ಲಿ ಕ್ಯಾಂಪ್ಕೊದ ನಿರಂತರ ಸಂಪರ್ಕ ಮತ್ತು ಒತ್ತಡದ ಪರಿಣಾಮ ಕೇಂದ್ರ ಸರಕಾರ ಸ್ಪಂದಿಸಿ ಈ ಆದೇಶವನ್ನು ಮಾಡಿದೆ ಎಂದರು.
ಅಡಕೆಯ ಆಮದು ಬೆಲೆಯನ್ನು ಹೆಚ್ಚಿಸಿ ಅಡಿಕೆ ಬೆಳೆಗಾರನಿಗೆ ಬೆಂಬಲ: ಕನಿಷ್ಠ ಆಮದು ಬೆಲೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಅವರು ಪುತ್ತೂರಿನಲ್ಲಿ ಕ್ಯಾಂಪ್ಕೊದ 5ನೇ ಕೃಷಿ ಯಂತ್ರ ಮೇಳ ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಿದ್ದರು. ಈಗ ತನ್ನ ಮಾತಿನಂತೆ ಕ್ರಮ ಕೈಗೊಂಡಿದ್ದಾರೆ. ಅಡಕೆಯ ಆಮದು ಬೆಲೆಯನ್ನು ಹೆಚ್ಚಿಸಿ ಅಡಿಕೆ ಬೆಳೆಗಾರನಿಗೆ ಬೆಂಬಲ ನೀಡಿರುವ ನರೇಂದ್ರ ಮೋದಿಯವರಿಗೆ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಷಾ ಮತ್ತು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕ್ಯಾಂಪ್ಕೊ ಕೃತಜ್ಞತೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಅಡಕೆಯ ಕನಿಷ್ಠ ಆಮದು ಬೆಲೆಯ ಹೆಚ್ಚಳದಿಂದ ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದ್ದು, ರೈತರು ಸುಳ್ಳು ಸುದ್ಧಿಗಳಿಗೆ ಕಿವಿಗೊಡದೆ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿ. ಅಡಕೆ ಧಾರಣೆಯ ಸ್ಥಿರತೆಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು. ಅಡಕೆ ಕ್ಯಾನ್ಸರ್ ಕಾರಕ ಎಂಬ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ಇದು ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ನಿರೂಪಿಸಲು ಪ್ರಯತ್ನ ಮಾಡಲಾಗುತ್ತದೆ. ನಿಟ್ಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದ್ದು, ಮೊದಲ ವರದಿ ಆಶಾದಾಯಕವಾಗಿ ಬಂದಿದೆ. ಪೂರ್ಣ ವರದಿ ಬಂದಾಗ ಅದನ್ನು ನ್ಯಾಯಾಲಯದ ವಿಚಾರಣೆ ವೇಳೆ ಮುಂದಿಡಲಾಗುವುದು ಎಂದು ಹೇಳಿದರು.
ಮಿಶ್ರ ಬೆಳೆಗೆ ಆದ್ಯತೆ ನೀಡಿ: ಅಡಿಕೆ ಕೃಷಿಕರು ಭವಿಷ್ಯದಲ್ಲಿ ಅಡಿಕೆ ಕೃಷಿಯನ್ನೆ ನಂಬಿ ಕೂರಬಾರದು. ಅಡಿಕೆಯೊಂದಿಗೆ ಮಿಶ್ರ ಬೆಳೆಯನ್ನು ಬೆಳೆಯಬೇಕು. ಅಡಕೆ ಕೃಷಿಯೊಂದಿಗೆ ಔಷಧೀಯ ಗಿಡಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಅಡಿಕೆಯ ಬೆಲೆ ಕುಸಿತದಿಂದ ಆಗುವ ಸಮಸ್ಯೆಯನ್ನು ಸರಿದೂಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಕನ್ಯಾಕುಮಾರಿಯಲ್ಲಿ ಮಂಗಳೂರು ಬೋಟ್ಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಗಾಯಗೊಂಡ ಮೀನುಗಾರರಿಂದ ದೂರು