ಮಂಗಳೂರು: ಕೊರೊನಾ ಸೋಂಕು ಭೀತಿಯಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿತ್ತು. ಇದರ ದುರ್ಲಾಭವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಡೆಯುತ್ತಿವೆ. ಈ ಮೂಲಕ ಇಡೀ ದೇಶದ ಕೃಷಿ ಉತ್ಪಾದನೆ ಹಾಗೂ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ದೇಶದ ಸಾರ್ವಭೌಮತ್ವ ಹಾಗೂ ಆಸ್ತಿಯನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುತ್ತಿದೆ ಎಂದರು.
ಇಂಥ ಕಠಿಣ ಸಂದರ್ಭದಲ್ಲಿ ಜನಪರ ನಿಲುವು ಕೈಗೊಳ್ಳಬೇಕಾಗಿದ್ದ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಿದೆ. ಇದರ ಜೊತೆಗೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದೆ. ಭೂಸುಧಾರಣೆ ತಿದ್ದುಪಡಿ ಮೂಲಕ ರೈತರ ವಶದಲ್ಲಿರುವ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳು, ಬಂಡವಾಳ ಶಾಹಿಗಳ ಕೈವಶವಾಗುವಂತೆ ಮಾಡುತ್ತಿದೆ. ಇದರಿಂದ ಕೃಷಿ ಸ್ವಾತಂತ್ರ್ಯ ಹಾಗೂ ಆಹಾರ ಭದ್ರತೆಗಳಿಗೆ ತೊಂದರೆಯಾಗಲಿದೆ. ಜೊತೆಗೆ ರೈತರು ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಈ ರೈತ ವಿರೋಧಿ ನಿಲುವಿನ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಲು, ಹೋರಾಟ ಮಾಡಲು ಅಗತ್ಯ ತಯಾರಿಗಳನ್ನು ಮಾಡುತ್ತಿದ್ದೇವೆ ಎಂದು ರವಿಕಿರಣ್ ಪುಣಚ ತಿಳಿಸಿದ್ದಾರೆ.