ಮಂಗಳೂರು: ಸೋಮವಾರ ಸಂಜೆ ಕಾಣೆಯಾಗಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಮೃತದೇಹ ಹೊಯ್ಗೆ ಬಜಾರ್ ಬಳಿ ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿ ಪತ್ತೆಯಾಗಿದೆ. ಅದು ಸಿದ್ಧಾರ್ಥ್ ಅವರ ದೇಹವೆಂದು ಸಂಬಂಧಿಕರು ದೃಢಪಡಿಸಿದ್ದಾರೆ.
ಮೃತದೇಹವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಬಳಿಕ ಸಂಬಂಧಿಕರ ತೀರ್ಮಾನದಂತೆ ಮೃತದೇಹವನ್ನು ಚಿಕ್ಕಮಗಳೂರಿನ ಚೇತನಹಳ್ಳಿಗೆ ತೆಗೆದುಕೊಂಡು ಹೋಗಲಾಗುವುದು.
ಮಾಜಿ ಸಿಎಂ ಎಸ್‌ಎಂಕೆ ನಿವಾಸದಲ್ಲಿ ನೀರವ ಮೌನ :
ಶಾಸಕ ಯು ಟಿ ಖಾದರ್ ಸಿದ್ದಾರ್ಥ್ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮೃತದೇಹ ಸಿಕ್ಕ ಬಗ್ಗೆ ಎಸ್ ಎಂ ಕೃಷ್ಣರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಬದುಕಿ ಬರುತ್ತಾರೆಂಬ ಆಶಾ ಭಾವವಿತ್ತು : ಯು ಟಿ ಖಾದರ್
ಸೋಮವಾರದಿಂದ ನಾಪತ್ತೆಯಾಗಿದ್ದ ಸಿದ್ದಾರ್ಥ್ ಬದುಕಿ ಬರುತ್ತಾರೆಂಬ ಆಸೆ ಇತ್ತು. ಆದರೆ, ಇಂದು ಬೆಳಗ್ಗೆ ಮೀನುಗಾರರು ನದಿಗೆ ಇಳಿದಾಗ ಮೃತದೇಹ ಸಿಕ್ಕಿದೆ. ಅದನ್ನು ಅವರು ತಂದು ದಡ ಸೇರಿಸಿದ್ದಾರೆ. ಬಳಿಕ ಪೊಲೀಸರು, ಕುಟುಂಬದವರು ಇದು ಸಿದ್ದಾರ್ಥ್ ಮೃತದೇಹವೆಂದು ಗುರುತು ಖಚಿತ ಪಡಿಸಿದ್ದಾರೆಂದು ಶಾಸಕ ಯು ಟಿ ಖಾದರ್ ತಿಳಿಸಿದ್ದಾರೆ.
ಮೃತದೇಹವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಮರಣೋತ್ತರ ಪರೀಕ್ಷೆ ಬಳಿಕ ತನಿಖೆ ಮುಂದುವರೆಸುತ್ತೇವೆ : ಎಸ್ಪಿ
ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರಿನ ಹೊಯ್ಗೆ ಬಜಾರ್ ಬಳಿ ಮೃತದೇಹ ಸಿಕ್ಕಿದೆ. ಅದು ಸಿದ್ದಾರ್ಥ್ ಅವರದ್ದೇ ಎಂದು ಗುರುತು ಖಚಿತ ಪಡಿಸಿದ್ದೇವೆ. ವೆನ್‌ಲಾಕ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಈ ಕುರಿತು ತನಿಖೆ ಮುಂದುವರೆಸುತ್ತೇವೆ ಎಂದು ಮಂಗಳೂರು ಎಸ್ಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ವೆನ್‌ಲಾಕ್ ಶವಾಗಾರದಲ್ಲಿ ಸಿದ್ಧಾರ್ಥ್ ಮೃತದೇಹ : ಶಾಸಕ ರಾಜೇಗೌಡ
ಬಿಸಿ ರೋಡ್, ಉಜಿರೆ ಬೆಳ್ತಂಗಡಿ, ಚಾರ್ಮಾಡಿ, ಮೂಡಿಗೆರೆ ಮೂಲಕ ಮೃತದೇಹ ಚಿಕ್ಕಮಗಳೂರಿಗೆ ರವಾನಿಸಲಾಗುವುದು. ಚಿಕ್ಕಮಗಳೂರಿನ ಬೇಲೂರು ತಾಲೂಕಿನ ಎಬಿಸಿ ಕ್ಯೂರಿಂಗ್ ಕಾಫಿ ಎಸ್ಟೇಟ್‌ನಲ್ಲಿ ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಮೃತದೇಹ ಕೊಂಡೊಯ್ಯುವ ಮುನ್ನ ವೆನ್‌ಲಾಕ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. 15-20 ನಿಮಿಷ ವೆನ್‌ಲಾಕ್ ಹೊರಭಾಗದಲ್ಲಿರಿಸಿ ಬಳಿಕ ಚಿಕ್ಕಮಗಳೂರಿಗೆ ಮೃತದೇಹ ಕೊಂಡೊಯ್ಯಲಾಗುತ್ತದೆ ಎಂದು ಶೃಂಗೇರಿ ಶಾಸಕ ರಾಜೇಗೌಡ ಮಾಹಿತಿ ನೀಡಿದರು.