ಬೆಂಗಳೂರು: ಕಳೆದ 11 ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 11 ವರ್ಷಗಳ ಹಿಂದೆ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣದ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ನ್ಯಾಯಾಲಯ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಅರೋಪದಡಿ ಬೆಳ್ತಂಗಡಿ ಠಾಣೆ ಪೊಲೀಸರು ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಪಿ.ಬಿ. ಅವರು ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಆರೋಪಿಯನ್ನು ದೋಷಮುಕ್ತ ಎಂದು ತೀರ್ಪು ಪ್ರಕಟಿಸಿದರು.
2012ರ ಅಕ್ಟೋಬರ್ 9 ರಂದು ಕಾಲೇಜಿಗೆ ಹೋಗುವಾಗ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಮಾರನೇ ದಿನ ಗ್ರಾಮವೊಂದರ ಬಳಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ತಂಗಡಿ ಠಾಣೆ ಪೊಲೀಸರು ಅತ್ಯಾಚಾರ ಹಾಗೂ ಕೊಲೆ ಆರೋಪ ಹಿನ್ನೆಲೆಯಲ್ಲಿ ಸಂತೋಷ್ ರಾವ್ನನ್ನು ಬಂಧಿಸಿದ್ದರು. ಉಡುಪಿಯ ಕಾರ್ಕಳ ತಾಲೂಕಿನ ಕುಕ್ಕುಂದುರು ನಿವಾಸಿ ಸಂತೋಷ್ನನ್ನು ಧರ್ಮಸ್ಥಳದ ಬಾಹುಬಲಿ ಪ್ರತಿಮೆ ಇರುವ ಬೆಟ್ಟದ ಬಳಿಯಲ್ಲಿ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಆರೋಪಿ ಪರ ವಕೀಲರಾದ ಮೋಹಿತ್ ಕುಮಾರ್ ವಾದ ಮಂಡಿಸಿ, ''ಅತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿಯು ಸ್ಥಳದಲ್ಲಿ ಇರಲಿಲ್ಲ. ಆರೋಪಿಯೇ ಅತ್ಯಾಚಾರ ಎಸಗಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಎರಡು ದಿನ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಯುವತಿಯ ಮೃತದೇಹ ಪತ್ತೆಯಾದಾಗ ಮಳೆ ಬರುತ್ತಿತ್ತು. ಅದೇ ದಿನ ಸುಮಾರು 500 ಜನರು ಹುಡುಕಾಟ ನಡೆಸಿದ್ದರು. ಅದರೆ ಯಾರೂ ಸಹ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. 50 ಮೀಟರ್ ಅಂತರದಲ್ಲಿನ ಟೆಂಟ್ನಲ್ಲಿ ಆರೋಪಿ ವಾಸವಾಗಿದ್ದ ಎಂಬ ಅನುಮಾನದ ಮೇಲೆ ಬಂಧಿಸಲಾಗಿತ್ತು. ಅಲ್ಲದೇ ಪ್ರಕೃತಿ ಚಿಕಿತ್ಸಾಲಯದಲ್ಲಿ ಪೊಲೀಸರು ಸಿಸಿಟಿವಿ ಸಂಗ್ರಹಿಸಿಲ್ಲ'' ಎಂಬ ಹಲವು ಅಂಶಗಳ ಬಗ್ಗೆ ವಾದ ಮಂಡಿಸಿದ್ದರು.
ಕೃತ್ಯ ನಡೆದ ಸ್ಥಳದಲ್ಲಿ ಆರೋಪಿ ಭಾಗಿಯಾಗಿರುವುದಕ್ಕೆ ಸೂಕ್ತ ಪುರಾವೆಯಿಲ್ಲದ ಕಾರಣ ನ್ಯಾಯಾಲಯವು ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಆರೋಪಿಯನ್ನು ದೋಷಮುಕ್ತ ಎಂದು ತೀರ್ಪು ನೀಡಿ, ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಐಎಸ್ ಉಗ್ರರ ಗುಂಪು ಸೇರಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿ: ಆರೋಪಿಗೆ ಜಾಮೀನು ನಿರಾಕರಣೆ