ಮಂಗಳೂರು: ಮನೆಯವರಿಗೆ ತಲ್ವಾರ್ ತೋರಿಸಿ ಬೆದರಿಕೆ ಒಡ್ಡಿ ಮನೆಯ ಪಕ್ಕದಲ್ಲಿಯೇ ಕಟ್ಟಿದ್ದ 3 ದನಗಳನ್ನು ಕದ್ದೊಯ್ದ ಘಟನೆ ನಗರದ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿ ಬಳಿ ನಡೆದಿದೆ. ಕೂಳೂರಿನ ಮಲರಾಯ ದೇವಸ್ಥಾನದ ಬಳಿಯಿರುವ ಉಮೇಶ್ ಎಂಬುವರು ತಮ್ಮ ಮನೆಯ ದನಗಳನ್ನು ಮನೆಯ ಹೊರಗಡೆ ಸ್ವಲ್ಪ ದೂರದಲ್ಲಿ ಕಟ್ಟಿ ಹಾಕಿದ್ದರು.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗೋವುಗಳನ್ನು ಬಲವಂತವಾಗಿ ವಾಹನದೊಳಗೆ ತುಂಬಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮನೆಯವರಿಗೆ ಈ ಬಗ್ಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಮನೆಯವರು ದನಗಳನ್ನು ಕಟ್ಟಿ ಹಾಕಿರುವ ಸ್ಥಳಕ್ಕೆ ಓಡಿ ಬಂದು ಕೂಗಾಡಿದ್ದಾರೆ. ಆಗ ಗೋಕಳ್ಳರು ತಲವಾರು ತೋರಿಸಿ ಮನೆಯವರು ಬಾರದಂತೆ ಬೆದರಿಕೆ ಒಡ್ಡಿದ್ದಾರೆ.
ಬಳಿಕ ಮೂರು ದನಗಳನ್ನು ವಾಹನದಲ್ಲಿ ತುಂಬಿಕೊಂಡು ಪರರಿಯಾಗಿದ್ದಾರೆ. ತಕ್ಷಣ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಕಾವೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಆಗಮಿಸಿ ಕೃತ್ಯ ಎಸಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ, ಕದ್ದೊಯ್ದ ಗೋವುಗಳನ್ನು ಪತ್ತೆಹಚ್ಚಬೇಕು. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಡಿ.4ರಂದು ಕಾವೂರು ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸಿಮ್ ಬದಲಾವಣೆ ಮಾಡಲು ಹೋಗಿ 29 ಸಾವಿರ ಕಳೆದುಕೊಂಡ ವ್ಯಕ್ತಿ