ಉಳ್ಳಾಲ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ದೇಶ ದ್ರೋಹ ಪ್ರಕರಣ ದಾಖಲಿಸುವಂತೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ವತಿಯಿಂದ ದೂರು ನೀಡಲಾಗಿದೆ.
ಕೇಸ್ ದಾಖಲಿಸದಿದ್ದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಎಸ್ಡಿಪಿಐ ಮುಂದಿಟ್ಟಿದೆ. ಎಸ್ಡಿಪಿಐ ಕಿನ್ಯಾ ಗ್ರಾಮ ಸಮಿತಿ ಸದಸ್ಯ ನೌಫಲ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೋಮು ಪ್ರಚೋದನೆ ಮತ್ತು ದೇಶ ದ್ರೋಹ ಪ್ರಕರಣದ ದೂರು ನೀಡಿದ್ದಾರೆ.
ನೀಡಿರುವ ದೂರಿನಲ್ಲಿ ನ.1 ರಂದು ಕಿನ್ಯಾದ ಕೇಶವ ಶಿಶು ಮಂದಿರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಷಣಗಾರರಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಉಳ್ಳಾಲ ಪಾಕಿಸ್ತಾನದ ಭಾಗವಾಗಿದೆ. ಆದುದರಿಂದ ಈ ಪ್ರದೇಶದಲ್ಲಿ ದೇವಸ್ಥಾನ ಮತ್ತು ಸಂಸ್ಕೃತಿಯನ್ನು ಉಳಿಸುವವರು ಯಾರು ಎಂದು ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಮಾತ್ರವಲ್ಲದೆ ಉಳ್ಳಾಲ ಪ್ರದೇಶದಲ್ಲಿ ಅಶಾಂತಿ ಸೃಷ್ಠಿ ಮಾಡಿ ಪರಸ್ಪರ ಎರಡು ಕೋಮುಗಳ ನಡುವೆ ವೈರತ್ವ ಉಂಟಾಗುವಂತೆ ಮಾಡಿ ಅಶಾಂತಿಗೆ ಕಾರಣರಾಗಿರುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ದೂರು ನೀಡಿದಾಗಲೂ ಅದನ್ನು ಲಘುವಾಗಿ ಪರಿಗಣಿಸಿ, ದೂರುದಾರನೊಂದಿಗೆ ಠಾಣೆಯ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿದ್ದಾರೆಂದು ಆರೋಪಿಸಿರುವ ಎಸ್ಡಿಪಿಐ, ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಲು ನಿರ್ಧಸಿದೆ. ಅಲ್ಲದೆ ಪ್ರಭಾಕರ ಭಟ್ ಮೇಲೆ ಕೇಸು ದಾಖಲಿಸದಿದ್ದಲ್ಲಿ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಬೇಕಾದೀತು ಎಂದು ಎಸ್ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ನಾ ಎಚ್ಚರಿಸಿದ್ದಾರೆ.