ಬಂಟ್ವಾಳ (ದಕ್ಷಿಣ ಕನ್ನಡ): ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 11, 933 ತಲುಪಿದೆ. ಒಟ್ಟು 392 ಮಂದಿ ಕೊರೊನಾಗೆ ಬಲಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಮೇ 3 ವರೆಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ. ಮೊದಲ ಲಾಕ್ ಡೌನ್ ಘೋಷಿಸಿದಾಗ ಕೂಡಾ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಯಾರೂ ಪ್ರಯಾಣಿಸುವಂತಿಲ್ಲ ಎಂದು ಎಚ್ಚರಿಸಲಾಗಿತ್ತು. ಆದರೂ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಾಜ್ಯಕ್ಕೆ ವಾಪಸಾಗಿದ್ದು ಆತನ ಮೇಲೆ ಪ್ರಕರಣ ದಾಖಲಾಗಿದೆ.
ತಾಲೂಕಿನ ಪುದು ಗ್ರಾಮದ ನಿವಾಸಿ ಮೊಹಮ್ಮದ್ ಅಶ್ರಫ್ ಎಂಬುವವರು ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್ ಡೌನ್ ಘೋಷಣೆಯಾದ ನಂತರ ಏಪ್ರಿಲ್ 11ರಂದು ಲಾರಿ ಮೂಲಕ ಮಂಗಳೂರಿಗೆ ಬಂದು ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಬೊಳ್ಳಾಯಿಯ ಸಂಬಂಧಿಕರ ಮನೆಯೊಬ್ಬರಲ್ಲಿ ನೆಲೆಸಿದ್ದರು. ಇದನ್ನು ಪತ್ತೆ ಹಚ್ಚಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸರು ಆತನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿ, ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದರೂ ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಪಡದೆ ನಿರ್ಲಕ್ಷ್ಯ ವಹಿಸಿ ಅಂತಾರಾಜ್ಯ ಗಡಿ ದಾಟಿ ಬಂದಿರುವ ಕಾರಣ ಆತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 269, 270 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.