ಬಂಟ್ವಾಳ (ದಕ್ಷಿಣ ಕನ್ನಡ): ತಿರುವಿನ ರಸ್ತೆಗಳಲ್ಲಿ ಮಹಿಳೆಯರನ್ನು ಕರೆದುಕೊಂಡು ಹೋಗುವ ಸಂದರ್ಭ ಕಾರು ಚಾಲಕ ನಡೆಸಿದ ಆಟಾಟೋಪವೊಂದು ಆತಂಕ ಸೃಷ್ಟಿಸಿದೆ. ನಂತರ ಸ್ಥಳೀಯರು ಕಾರನ್ನು ಅಡ್ಡಹಾಕಿ ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ಭಾನುವಾರ ನಡೆದಿದೆ. ಕಾಡುಮಠ ಕಾಲೋನಿ ನಿವಾಸಿ ಜಯ ಎಂಬುವರ ಪುತ್ರ ಸಾಗರ್ (26) ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ತೊಕ್ಕೊಟ್ಟು ಸಮೀಪ ಪಿಲಾರಿನ ಮಹಿಳೆಯರಿಬ್ಬರು ಕಾರಿನಲ್ಲಿದ್ದರು.
ತೊಕ್ಕೊಟ್ಟು ಸಮೀಪದ ಪಿಲಾರಿನ ಮಹಿಳೆಯರಿಬ್ಬರು ಪಣೋಲಿಬೈಲು ಕ್ಷೇತ್ರಕ್ಕೆ ಹೋಗಲು ಮಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಹೊರಟಿದ್ದರು. ಕಾರು ಚಾಲಕ ಸಾಗರ್ ಬದಲಿ ರಸ್ತೆಗಳ ಮೂಲಕ ವೇಗವಾಗಿ ಒಟ್ಟಾರೆಯಾಗಿ ಕಾರನ್ನು ಚಲಾಯಿಸಿದ್ದಾನೆ. ಮೊದಲೇ ತಿರುವುಮುರುವು ರಸ್ತೆ, ಅದರಲ್ಲೂ ವೇಗವಾಗಿ ಹೋಗುವ ಕಾರನ್ನು ನೋಡಿ ಮಹಿಳೆಯರಿಬ್ಬರೂ ಭಯಭೀತರಾಗಿ ಚಾಲಕನ ಬಳಿ ವೇಗ ತಗ್ಗಿಸುವಂತೆ ಕೇಳಿಕೊಂಡಿದ್ದಾರೆ. ಚಾಲಕ ಇದಕ್ಕೆ ಕ್ಯಾರೇ ಎನ್ನದೇ ಜೋರಾಗಿ ಕಾರನ್ನು ಓಡಿಸಿದ್ದಾನೆ. ಮುಡಿಪು-ಬಾಕ್ರಬೈಲು ರಸ್ತೆಯಲ್ಲಿ ಸಂಚರಿಸುತ್ತಿದ್ದಂತೆ ಚಾಲಕನ ವರ್ತನೆಯಿಂದ ಬೆದರಿ ಕಂಗಾಲಾದ ಮಹಿಳೆಯರು ತಲೆ ಹೊರಗಡೆ ಹಾಕಿ ಕಾರು ನಿಲ್ಲಿಸುವಂತೆ ಬೊಬ್ಬೆ ಹೊಡೆದಿದ್ದಾರೆ.
ಇದನ್ನು ನೋಡಿದ ಸಾರ್ವಜನಿಕರು ಸಾಲೆತ್ತೂರು, ಕುಡ್ತಮುಗೇರು ಕಡೆಗಳಿಗೆ ಮೊಬೈಲ್ ಕರೆ ಮಾಡಿ ಮಹಿಳೆಯರ ಅಪಹರಣವಾಗಿದೆ, ಕಾರನ್ನು ತಡೆಯುವಂತೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸುದ್ದಿ ತಿಳಿದ ಹಲವಾರು ಮಂದಿ ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡವಾಗಿಟ್ಟು ಸಾಲೆತ್ತೂರು ಸಮೀಪದ ಕಾಡುಮಠದಲ್ಲಿ ಕಾರು ತಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಜನ ಜಮಾಯಿಸಿ ಕಾರನ್ನು ಸುತ್ತುವರಿಯುತ್ತಿದ್ದಂತೆ ಒಳಗಿದ್ದ ಮಹಿಳಾ ಪ್ರಯಾಣಿಕರಿಬ್ಬರು ಕಣ್ಣೀರಿಡುತ್ತಾ ಜನರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿ ಬಾಯಿಗೆ ತುತ್ತಿಟ್ಟು ಅವರ ಎಂಜಲು ಸೇವಿಸಿದ ಶಾಸಕ ಜಮೀರ್ ಅಹ್ಮದ್
ತಕ್ಷಣವೇ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರ ತಂಡ ಸಾರ್ವಜನಿಕರ ವಶದಲ್ಲಿದ್ದ ಚಾಲಕ ಕಾಡುಮಠ ಕಾಲೋನಿ ನಿವಾಸಿ ಸಾಗರ್ (26) ಮತ್ತು ಆತನ ಕಾರನ್ನು ವಶಕ್ಕೆ ಪಡೆದರು. ಆದ್ರೆ ಮಹಿಳಾ ಪ್ರಯಾಣಿಕರು ಯಾವುದೇ ದೂರನ್ನು ನೀಡದ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಅವನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.