ಮಂಗಳೂರು: ದ್ವಿಚಕ್ರ ವಾಹನವೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಮಹಿಳೆಯರಿಬ್ಬರು ರಸ್ತೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ನಾಯಕ್ಸ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ನಡೆದಿದೆ.
ವಿಟ್ಲದ ಮಂಕುಡೆ ಮೂಲದ ತಾಯಿ-ಮಗಳು ದ್ವಿಚಕ್ರ ವಾಹನದಲ್ಲಿ ಉಕ್ಕುಡ ಕಡೆಯಿಂದ ಮಂಕುಡೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ವಿಟ್ಲದ ನಾಯಕ್ಸ್ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿದ್ದಾರೆ. ಬಳಿಕ ಬಂಕ್ನ್ನಿಂದ ಬರುವಾಗ ಬಲಬದಿಯನ್ನು ಗಮನಿಸದೆ ಏಕಾಏಕಿ ಮುಖ್ಯ ರಸ್ತೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ನಾಲ್ಕು ಮಾರ್ಗ ಜಂಕ್ಷನ್ ಕಡೆಯಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.
ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗಳು ದೂರಕ್ಕೆ ಹೋಗಿ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಈ ಅಪಘಾತದ ದೃಶ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.