ಪುತ್ತೂರು: ಕೇರಳ ನೋಂದಣಿ ಹೊಂದಿರುವ ಕಾರೊಂದು ಪುತ್ತೂರಿನ ದರ್ಭೆ ಬೈಪಾಸ್ ಬಳಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 9 ವರ್ಷದ ಮಗು ಹಾಗೂ ಗಂಭೀರ ಗಾಯಗೊಂಡಿದ್ದ ಮಹಿಳೆಯೂ ಮೃತಪಟ್ಟಿರುವ ಘಟನೆ ನಡೆದಿದೆ.
ಈ ಘಟನೆ ಮಧ್ಯಾಹ್ನ ನಡೆದಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳು ಹಾಗೂ ಮಹಿಳೆಗೆ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಮಹಿಳೆಗೆ ಸಣ್ಣಪುಟ್ಟ ಗಾಯಗಳು ಆಗಿದ್ದವು. ಕೂಡಲೇ ಮೂವರನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದರಲ್ಲಿ 9 ವರ್ಷದ ಒಂದು ಮಗು ಮೃತಪಟ್ಟಿತ್ತು. ಇನ್ನೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಮಹಿಳೆಗೆ ಪುತ್ತೂರಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಗಂಭೀರ ಗಾಯಗೊಂಡಿದ್ದ ದರ್ಬೆ ನಿವಾಸಿ ಗೀತಾ ರವರೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಂಗಳೂರಿನಿಂದ ಸುಳ್ಯದತ್ತ ಚಲಿಸುತ್ತಿದ್ದ ಸ್ವಿಫ್ಟ್ ಕಾರು(ಕೆಎಲ್ 14ಆರ್ 5717) ದರ್ಬೆ ಬೈಪಾಸಿನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಈ ಇಬ್ಬರು ಮಕ್ಕಳಿಗೆ ಹಾಗೂ ಮಹಿಳೆಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಲ್ಲಿದ್ದ ಎಕ್ಸ್ ಕ್ರಾಸ್ (ಕೆಎ3ಎನ್ ಎಕ್ಸ್ 5100) ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಕ್ಸ್ ಕ್ರಾಸ್ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಪುತ್ತೂರು ನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕ ಪುತ್ತೂರಿನ ಮಾಜಿ ಕೌನ್ಸಿಲರ್ವೊಬ್ಬರ ಸಂಬಂಧಿ ಎಂದು ತಿಳಿದು ಬಂದಿದೆ.