ಮಂಗಳೂರು: ಬಡ ಆಟೊ ಚಾಲಕನೋರ್ವನ ಮನೆ ಸಾಲದ ಕಂತಿಗಾಗಿ ಕೊರೊನಾ ಪರಿಹಾರವೆಂದು ಸರಕಾರ ನೀಡಿರುವ 3 ಸಾವಿರ ರೂ. ಸಹಿತ ಬ್ಯಾಂಕ್ ಖಾತೆಯಲ್ಲಿದ್ದ 2,700ನ್ನೂ ತೆಗೆದುಕೊಂಡಿದ್ದ ಕೆನರಾ ಬ್ಯಾಂಕ್ ಇದೀಗ 3 ಸಾವಿರ ರೂ.ಗಳನ್ನು ಮರಳಿ ಅವರ ಖಾತೆಗೆ ಜಮೆ ಮಾಡಿದೆ.
ಸುರತ್ಕಲ್ ಸೂರಿಂಜೆ ನಿವಾಸಿ ಆಟೋ ಚಾಲಕ ಬಶೀರ್ ಮನೆ ಸಾಲದ ಮೇ ತಿಂಗಳ ಕಂತು ಕಟ್ಟಲು ಲಾಕ್ ಡೌನ್, ಕೊರೊನಾ ಬಿಕ್ಕಟ್ಟಿನಿಂದಾಗಿ ಅಸಾಧ್ಯವಾಗಿತ್ತು. ಸಾಲಕೊಟ್ಟ ಕೆನರಾ ಬ್ಯಾಂಕ್ ಬೈಕಂಪಾಡಿ ಬ್ರಾಂಚ್ನ ಅಧಿಕಾರಿಗಳಲ್ಲಿ ಮೂರ್ನಾಲ್ಕು ತಿಂಗಳು ಕಂತು ಪಾವತಿಗೆ ವಿನಾಯತಿ ಕೇಳಿದ್ದರು. ಅಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೆ ಅವರ ಖಾತೆಯಲ್ಲಿದ್ದ 2700 ರೂ. ಹಾಗೂ ಆಟೋ ಚಾಲಕರಿಗೆ ಕೊರೊನಾ ಪರಿಹಾರವಾಗಿ ಸರಕಾರ ನೀಡಿದ 3 ಸಾವಿರ ರೂ.ವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡಿಕೊಂಡಿತ್ತು.
ಈ ಕುರಿತು ಆಟೋ ಚಾಲಕ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಕೆನರಾ ಬ್ಯಾಂಕ್ ಆಡಳಿತದ ನಡೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಬ್ಯಾಂಕ್ನ ವರ್ತನೆಗೆ ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು.
ಇದರಿಂದ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ. ರೀಷೆಡ್ಯೂಲ್ ಆಫರನ್ನೂ ನೀಡಿದೆ. ಈ ಮಾಹಿತಿ ಇಲ್ಲದ ಉಳಿದ ದೊಡ್ಡ ಸಂಖ್ಯೆಯ ಸಾಲಗಾರರಿಗೂ ಇದರ ಲಾಭ ಸಿಕ್ಕಿದೆ. ಸರಕಾರ ಪರಿಹಾರವಾಗಿ ನೀಡಿದ ಮೊತ್ತವನ್ನು ಸಾಲಕ್ಕೆ ಮುರಿಯುವ ಕೆಟ್ಟ ಕ್ರಮಕ್ಕೂ ಕಡಿವಾಣ ಬಿದ್ದಿದೆ.