ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಸ್ಪಷ್ಟ ಬಹುಮತ ಪಡೆದ ಬಿಜೆಪಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
ಪಾಲಿಕೆಯ 60 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನ ಗಳಿಸಿದ್ರೆ, ಕಾಂಗ್ರೆಸ್ 14 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಎಸ್ಡಿಪಿಐ 2 ಸ್ಥಾನ ಗಿಟ್ಟಿಸಿದೆ. ಪಾಲಿಕೆಯ ಫಲಿತಾಂಶ ಹೊರಬರ್ತಿದ್ದಂತೆ ಕಾರ್ಯಕರ್ತರು ಸಂಭ್ರಮಿಸಿದರು.
ಮಂಗಳೂರು ಮಹಾನಗರ ಪಾಲಿಕೆಗೆ ಈವರೆಗೆ ಒಟ್ಟು 7 ಬಾರಿ ಚುನಾವಣೆ ನಡೆದಿದೆ. ಇದರಲ್ಲಿ ಐದು ಬಾರಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡರೆ, ಬಿಜೆಪಿ ಒಂದು ಬಾರಿ ಆಡಳಿತ ಮಾಡಿತ್ತು. ಏಳನೇ ಬಾರಿ ನಡೆದ ಈ ಚುನಾವಣೆಯಲ್ಲಿ ಮತದಾರ ಪ್ರಭು ಮತ್ತೆ ಬಿಜೆಪಿಯ ಕೈ ಹಿಡಿದು ಎರಡನೇ ಬಾರಿಗೆ ಅಧಿಕಾರ ಕೊಟ್ಟಿದ್ದಾನೆ.
ಫಲಿತಾಂಶದ ಕುರಿತು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇದು ಮತದಾರರ ಗೆಲುವು. ಮುಂಬರುವ ದಿನಗಳಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.