ಮಂಗಳೂರು: ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವುದೇ ಬಿಜೆಪಿ ನಾಯಕರ ಡ್ಯೂಟಿ ಎಂದು ಮಂಗಳೂರಿನಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ಕೆಲಸವೇ ಮಕ್ಕಳಲ್ಲಿ ಅಶಾಂತಿ ಸೃಷ್ಟಿಸುವುದು. ಈ ಕೆಲಸವನ್ನು ಅವರು ಮೊದಲಿನಿಂದಲೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ದೇಶ ಬಹಳ ಕಷ್ಟದ ಪರಿಸ್ಥಿತಿಯಲ್ಲಿದೆ. ಆದ್ದರಿಂದ ದೇಶದ ಮರು ನಿರ್ಮಾಣ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆಯಿದೆ. ಹಾಗಾಗಿ ಪಕ್ಷದಲ್ಲಿ ಹೊಸ ಸದಸ್ಯತ್ವದ ಅಭಿಯಾನ ಆರಂಭವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಚುನಾವಣೆ ಕೂಡಾ ಘೋಷಣೆಯಾಗಿದೆ. ಆದ್ದರಿಂದ ಮತದಾನದ ಹಕ್ಕು ಕೊಡುವುದಕ್ಕಾಗಿ ಒಂದು ತಿಂಗಳ ಸದಸ್ಯತ್ವದ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ಓದಿ: ಆಟದ ಮೈದಾನ ಒತ್ತುವರಿ ಮಾಡಿಕೊಂಡಿದ್ದ ಕಿರಾತಕ: ಮಕ್ಕಳ ಪರವಾಗಿ ಪ್ರಶ್ನಿಸಿದ್ದಕ್ಕೆ ಕೊಡಲಿ ಏಟು
ಈ ಸದಸ್ಯತ್ವ ಅಭಿಯಾನಕ್ಕಾಗಿ 40 ಬೂತ್ಗಳಿಗೆ ಒಬ್ಬರಂತೆ ಚೀಫ್ ಎನ್ ರೋಲರ್ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಭಾವನೆ ಪಕ್ಷದ ರಾಜ್ಯಾಧ್ಯಕ್ಷರ ಭಾವನೆಯಾಗಬೇಕು. ಆದ್ದರಿಂದ ಹೆಚ್ಚಿನ ಸದಸ್ಯರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಬೇಕೆಂದು ಸದಸ್ಯತ್ವ ಅಭಿಯಾನ ನಡೆಯಲಿದೆ.
ಯಾರಿಗೆ ಪಕ್ಷದ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆಯಿದೆ ಅವರಿಗೆ ಸದಸ್ಯರಾಗಲು ಅವಕಾಶವಿದೆ. ಅವರು ಕೇವಲ 5 ರೂ. ನೀಡಿ ಸದಸ್ಯರಾಗಬಹುದು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 10 ರೂ. ನೀಡಿದ್ದಲ್ಲಿ ಐಡಿ ಕಾರ್ಡ್ ಅನ್ನೂ ಪಡೆಯಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.