ಮಂಗಳೂರು (ದ.ಕ): ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್ ಅವರಿಗೆ ಕೊಡಿಯಾಲ್ ಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸರಳವಾಗಿ ಅಭಿನಂದನಾ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರವಿಶಂಕರ್ ಮಿಜಾರ್ ಹಾಗೂ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಹರಿಕೃಷ್ಣ ಬಂಟ್ವಾಳ ಅವರಿಗೂ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಪಕ್ಷದಲ್ಲಿ ಸ್ಥಾನ ಬೇಕೆಂದು ಯಾರೂ ಬರುವುದಿಲ್ಲ. ಆದರೆ ಆ ಬಳಿಕ ಯಾರಾದರೂ ನೀವು ಎಂಎಲ್ಎ ಆಗಬಹುದು ಎಂದಾಗ ನಮಗೂ ಹೌದಲ್ಲಾ ಎಂಬ ಭ್ರಮೆ ಮೂಡುತ್ತದೆ. ಎಷ್ಟೋ ಸಲ ಕೆಲವೊಂದು ಸ್ಥಾನಕ್ಕೆ ನನ್ನ ಹೆಸರು ಬಂದಿತ್ತು. ಆದರೆ ಅದು ಈಡೇರಿರಲಿಲ್ಲ. ಆದರೆ ನನಗೆ ಪಕ್ಷದಲ್ಲಿ ಸ್ಥಾನಮಾನ ದೊರೆತಿದೆ, ಸಾಕಷ್ಟು ಮಂದಿಯ ಪ್ರೀತಿ ದೊರಕಿದೆ. ಒಂದು ವಿಚಾರಕ್ಕಾಗಿ ದುಡಿದ ಸಮಾಧಾನ ಸಿಕ್ಕಿದೆ. ಆದರೆ ಈ ಬಾರಿ ನನ್ನನ್ನು ಪಕ್ಷ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿದೆ. ಇದು ತುಂಬಾ ಸಂತೋಷ ತಂದಿದೆ ಎಂದರು.
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಮುಡಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರವಿಶಂಕರ್ ಮಿಜಾರ್ ಹಾಗೂ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಹರಿಕೃಷ್ಣ ಬಂಟ್ವಾಳ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಸಂಜೀವ ಮಠಂದೂರು, ಡಾ.ವೈ.ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮೂಡುಬಿದಿರೆ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.