ಮಂಗಳೂರು: ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪಿಸುವಾಗ, ಆ ವ್ಯಕ್ತಿತ್ವದ ಹಿಂದೆ ಅನುಭವಗಳು ಅನುಭಾವಿಗಳಾಗಿ ಮಾರ್ಪಾಡಾಗಿ ಹೋಗುತ್ತದೆ. ನಾವೆಲ್ಲರೂ ವ್ಯಕ್ತಿಗಳಾಗಿ ನಮ್ಮ ನಮ್ಮ ಜೀವನ ನಡೆಸಲು ಸಾಧ್ಯ. ಆದರೆ ವ್ಯಕ್ತಿತ್ವದ ಪ್ರಭಾವಳಿಯೊಂದು ನಮ್ಮ ಸುತ್ತಲೂ ಮೂಡಬೇಕಾದರೆ ಅದರದ್ದೇ ಆದ ಮಹತ್ವದ ವ್ಯಕ್ತಿತ್ವ ಬೇಕಾಗುತ್ತದೆ. ಅದು ಅನುಭಾವಿಯಾಗಿ ತನ್ನ ಜೀವನವನ್ನು ಮಾರ್ಪಾಡು ಮಾಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನ ಪುರಭವನದಲ್ಲಿ ನಡೆದ ದಿ.ಬಿ ಎಂ ಇದಿನಬ್ಬ ಜನ್ಮಶತಮಾನೋತ್ಸವ ಹಾಗೂ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದಿನಬ್ಬರು ತನ್ನೊಳಗಿನ ಎಲ್ಲಾ ಪ್ರತಿಭೆಗಳಿಗೆ ರೂಪಕವನ್ನು ಸೃಷ್ಟಿ ಮಾಡುತ್ತಾ ಹೋಗುತ್ತಾರೆ. ಆದರೆ ಇದರ ಹಿಂದೆ ಅವರಿಗೆ ಯಾವ ಸ್ವಾರ್ಥವೂ ಇಲ್ಲ. ಇಂದು ಪ್ರಪಂಚ ಕೊಡು ಕೊಳ್ಳುವಿಕೆಯಿಂದ ತನ್ನನ್ನು ನಾಶ ಮಾಡಿಕೊಂಡು ಹೋಗುವಾಗ ಇಂತಹ ವೇದಿಕೆ, ಸ್ಮರಣೆಗಳು ಅಗತ್ಯ ಎಂದು ಹೇಳಿದರು.
ದಿ.ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿಯನ್ನು ಪಡೆದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ, ಬಿ.ಎಂ. ಇದಿನಬ್ಬರ ಹೆಸರಿನಲ್ಲಿ ನನಗೆ ದೊರೆತ ಪ್ರಶಸ್ತಿ ಪಡೆಯಲು ನನಗೆ ಹೆಮ್ಮೆಯೆನಿಸುತ್ತದೆ. ರಾಜ್ಯದಲ್ಲಿ ಅರೇಬಿಕ್ ಭಾಷೆಯಲ್ಲಿ ಕೋರ್ಸ್, ಮುಸ್ಲಿಮರ ಜಾನಪದ ಕಲೆಗಳ ಬಗ್ಗೆ ಒಂದು ಕೋರ್ಸ್ ಅನ್ನು ನಮ್ಮ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನೀಡಲಾಗುತ್ತಿದೆ. ಬಿ.ಎಂ.ಇದಿನಬ್ಬರ ಕುರಿತಾದ ಮಹತ್ವದ ಕೃತಿಯೊಂದನ್ನು ಹೊರತರಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಇದಿನಬ್ಬನವರ ಮಕ್ಕಳಾದ ಬಿ.ಎಂ. ಅಬ್ದುರಹ್ಮಾನ್ ಬಾಷಾ, ಬಿ.ಎಂ.ಬದ್ರುದ್ದೀನ್, ಫಾತಿಮಾ, ಖತೀಜಮ್ಮ, ನಫೀಸಾ, ಝುಬೈದಾ, ಮೊಮ್ಮಗ ಶಬೀರ್ ಹಸನ್ ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಕ.ಸಾ.ಪಾ. ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕಲ್ಕೂರ, ಹರಿಕೃಷ್ಣ ಪುನರೂರು, ಅಬ್ದುಲ್ ರಶೀದ್ ಮತ್ತಿರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ ಮೃತ