ಮಂಗಳೂರು: ನಗರದ ಹಂಪನಕಟ್ಟೆ ಸಿಗ್ನಲ್ನಲ್ಲಿ ಬೈಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದ್ದು, ಅವಘಡದಲ್ಲಿ ವಾಹನಗಳು ಸುಟ್ಟುಹೋಗಿವೆ.
ಜ್ಯೋತಿ ಕಡೆಯಿಂದ ಸ್ಟೇಟ್ ಬ್ಯಾಂಕ್ನತ್ತ ಬರುವ ಅಸೆಲ್ ಎಂಬ ಖಾಸಗಿ ಸಿಟಿ ಬಸ್ ಹಂಪನಕಟ್ಟೆ ಸಿಗ್ನಲ್ ದಾಟಿ ಮುಂದೆ ಚಲಿಸುತ್ತಿದ್ದಂತೆ ಹಂಪನಕಟ್ಟೆಯಿಂದ ವೆಲೆನ್ಸಿಯ ಕಡೆಗೆ ಹೋಗುತ್ತಿದ್ದ ಬೈಕೊಂದು ಬಸ್ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ತಕ್ಷಣ ಬೈಕ್ ಬಸ್ನ ಚಕ್ರದಡಿಗೆ ಬಿದ್ದಿದ್ದು, ಬೈಕ್ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್ನ ಡೀಸೆಲ್ ಟ್ಯಾಂಕ್ಗೆ ಕೂಡ ಬೆಂಕಿ ಆವರಿಸಿಕೊಂಡು ಬಸ್ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಬೈಕ್ ಸವಾರ ಬಲ್ಲಾಳ್ ಬಾಗ್ನ ಡೈಲನ್ (26) ಎಂಬುವರ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಗೆ ಬೆಂಕಿ ಹೊತ್ತಿದ ತಕ್ಷಣ ಅದರಲ್ಲಿದ್ದ ಪ್ರಯಾಣಿಕರು, ಚಾಲಕ, ನಿರ್ವಾಹಕರು ಕೆಳಗಿಳಿದು ಪಾರಾಗಿದ್ದಾರೆ. ಬಸ್ ಹಾಗೂ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಂದಿದ್ದು ಹುಸಿ ಬಾಂಬ್ ಬೆದರಿಕೆ: ಪೋಷಕರ ನಿಟ್ಟುಸಿರು