ಮಂಗಳೂರು: ನಗರದ ಪಡೀಲ್ನಲ್ಲಿರುವ ರೈಲ್ವೆ ಅಂಡರ್ ಪಾಸ್‌ನಲ್ಲಿ ಗುರುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭವಿನ್ ರಾಜ್ (20) ಮೃತಪಟ್ಟ ಯುವಕ. ಈತನ ಜೊತೆಗೆ ಬೈಕ್ನಲ್ಲಿದ್ದ ಗಾಲ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭವಿನ್ ರಾಜ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ. ಈತ ಗೆಳೆಯರ ಜೊತೆಗೆ ಸಂಜೆ ತನ್ನ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಪಡೀಲ್ ಅಂಡರ್‌ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಮೂವರು ಕೂಡ ಗಾಯಗೊಂಡಿದ್ದರು. ಈ ಪೈಕಿ ಭವಿನ್ ರಾಜ್ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಪ್ರತ್ಯೇಕ ಪ್ರಕರಣಗಳ ವರದಿ: ಪೊಲೀಸ್ ಆತ್ಮಹತ್ಯೆ.. ಮಂಗಳೂರು ನಗರ ಪೊಲೀಸ್ ಸೇವೆಯಲ್ಲಿದ್ದ ಗದಗ ಮೂಲದ ಪೊಲೀಸ್ ಸಿಬ್ಬಂದಿ ಓರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣದ ಯಾವಗಲ್ನ ಮಹೇಶ್ ಸವದತ್ತಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ.
ಇವರು 2018ರ ಜುಲೈ 23 ರಂದು ಪೊಲೀಸ್ ಇಲಾಖೆಗೆ ನೇಮಕಾತಿ ಹೊಂದಿ ಮೂಲ ತರಬೇತಿಯನ್ನು ಹಾಸನದಲ್ಲಿ ಪಡೆದಿದ್ದರು. 2019 ಮೇ 7ರಂದು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ಗುರುವಾರ (ನಿನ್ನೆ) ನಗರದ ಕಫಿತಾನಿಯೋ ಬಳಿಯ ಸೈಮಾನ್ ಲೈನ್ನಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಮಹೇಶ್ ವಿವಾಹವಾಗಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ-ಓರ್ವ ಆರೋಪಿ ಬಂಧನ: ಮೂಡಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆ ತಾಲೂಕಿನ ತೋಡಾರು ಗ್ರಾಮದ ಇದಾಯತ್ ನಗರದ ಮಹಮ್ಮದ್ ಸಾಯಿಲ್ (21) ಬಂಧಿತ ಆರೋಪಿ.
ಬೆಳುವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್‌ಗಳನ್ನು ಕಳ್ಳರು ಕಳ್ಳತನ ಮಾಡಿದ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಕಳ್ಳತನ ಮಾಡಿದ ಮೊದಲನೆ ಆರೋಪಿ ಮಹಮ್ಮದ್ ಸಾಯಿಲ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 2,50,000 ರೂ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪ್ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಕೋಲಾರ: ಅರ್ಧ ಗಂಟೆಯಲ್ಲೇ ಅಪಹರಣಕ್ಕೊಳಗಾದ ಬಾಲಕನ ರಕ್ಷಣೆ.. ಆರೋಪಿಗಳ ಬಂಧನ