ಮಂಗಳೂರು: ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಇಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದು, ಈ ವೇಳೆ ಪೊಲೀಸರು ರೂಪೇಶ್ ಶೆಟ್ಟಿ ಜೊತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮ ಪಟ್ಟರು. ಸೋಮವಾರ ಮಧ್ಯಾಹ್ನ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಬಂದ ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ಕಮಿಷನರ್ ಶಶಿಕುಮಾರ್ ಜೊತೆಗೆ ಮಾತುಕತೆ ನಡೆಸಿದರು. ಆ ಬಳಿಕ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಪೇಟ, ಹಾರ ತೊಡಿಸಿ ಸನ್ಮಾನಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಉತ್ಸಾಹದಿಂದ ರೂಪೇಶ್ ಶೆಟ್ಟಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ರೂಪೇಶ್ ಶೆಟ್ಟಿ ಸಣ್ಣ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿ ಇದೀಗ ದೊಡ್ಡ ಕಲಾವಿದನಾಗಿ ಬೆಳೆದಿದ್ದಾರೆ. ತುಳು ಚಿತ್ರಗಳಿಂದ ಕಲಾವಿದನಾಗಿ ಬಂದ ಅವರಿಗೆ ಬಿಗ್‌ಬಾಸ್ ನಂತಹ ದೊಡ್ಡ ವೇದಿಕೆ ಸಿಕ್ಕಿದೆ. ತುಳು, ಕನ್ನಡ, ಕೊಂಕಣಿ ಭಾಷೆಯಲ್ಲಿ ನಟಿಸಿ ಇವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಜನಿಸಿದ್ದರೂ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ದಿಬ್ಬಣ, ಐಸ್ ಕ್ರೀಂ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಇವರಿ ಗಿರಿಗಿಟ್ ಸಿನಿಮಾ ಯಶಸ್ವಿಯಾಗಿದೆ.
ಬಿಗ್ಬಾಸ್ನಲ್ಲಿ ವಿನ್ನರ್ ಮಾತ್ರವಲ್ಲದೇ ಸ್ಪರ್ಧಿಗಳಿಗೂ ಉತ್ತಮ ಅವಕಾಶ ಸಿಗುತ್ತದೆ. ನಾನು ಕೆಲವೊಂದು ಎಪಿಸೋಡ್ ಗಳನ್ನು ನೋಡಿದ್ದೇನೆ. ರೂಪೇಶ್ ಶೆಟ್ಟಿ ಅವರ ಭಾಗವಹಿಸುವಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅತಿರೇಕ, ಕೃತಕತೆಯಿಲ್ಲದೆ ಅವರು ಬಿಗ್‌ಬಾಸ್ ನಲ್ಲಿ ನಡೆದುಕೊಂಡಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ಒಟ್ಟು 2 ಕೋಟಿ ಮತದಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಒಂದು ಕೋಟಿ ಮತ ಸಿಕ್ಕಿರುವುದು ದೊಡ್ಡ ವಿಚಾರ.
ಪೊಲೀಸರು ಜ್ಯೋತಿಷಿಗಳಂತೆ: 60 -70 ಸಾವಿರ ಮತ ಪಡೆದರೆ ಶಾಸಕರಾಗಬಹುದು, 4-5 ಲಕ್ಷ ಮತ ಪಡೆದರೆ ಎಂಪಿ ಆಗಬಹುದು. ಅಂತಹದರಲ್ಲಿ ರೂಪೇಶ್ ಶೆಟ್ಟಿ ಒಂದು ಕೋಟಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೂಪೇಶ್ ಶೆಟ್ಟಿ ಪೊಲೀಸ್ ಅಧಿಕಾರಿಗಳ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ಬಂದಿರುವ ವಿಚಾರ ತಿಳಿದು ನಮ್ಮ ಪೊಲೀಸ್ ಅಧಿಕಾರಿಗಳ ಜೊತೆಗೆ ಭೇಟಿ ಮಾಡಿಸುವ ಉದ್ದೇಶದೊಂದಿಗೆ ಇಂದು ಅವರನ್ನು ಆಹ್ವಾನಿಸಲಾಗಿದೆ. ಸಿನಿಮಾ ರಂಗದಲ್ಲಿ ರಿಷಬ್ ಶೆಟ್ಟಿ, ರಾಜ್ ಶೆಟ್ಟಿ, ರಕ್ಷಿತ್ ಶೆಟ್ಟಿ ತ್ರಿಬಲ್ R (RRR) ಆಗಿ ಮಿಂಚಿದ್ದಾರೆ. ರೂಪೇಶ್ ಶೆಟ್ಟಿ ಅವರು ಈ RRR ಜೊತೆಗೆ ಸೇರಲಿ. ಪೊಲೀಸರು ಜ್ಯೋತಿಷಿಗಳಿದ್ದಂತೆ. ಅವರಿಗೆ ಬಂದೋಬಸ್ತ್ ಕೊಡುವ ಮಟ್ಟಿಗೆ ಅವರಿಗೆ ಯಶಸ್ಸು ಸಿಗಲಿ ಎಂದು ಶುಭಹಾರೈಸಿದರು.
ಕಲೆಯ ಬಗ್ಗೆ ಇರುವ ಖಾಳಜಿ: ಈ ಸಂದರ್ಭದಲ್ಲಿ ಮಾತನಾಡಿದ ರೂಪೇಶ್ ಶೆಟ್ಟಿ ಇಂದು ತುಂಬಾ ಶೆಡ್ಯೂಲ್ ಇದ್ದರೂ ಕಮಿಷನರ್ ಅವರ ಆಮಂತ್ರಣಕ್ಕೆ ಗೌರವ ಕೊಟ್ಟು ಮೊದಲು ಇಲ್ಲಿಗೆ ಬಂದಿದ್ದೇನೆ. ಮೂರು ವಿಚಾರಗಳಿಂದ ಪೊಲೀಸರ ಬಗ್ಗೆ ತುಂಬಾ ಗೌರವವಿದೆ. ಮೊದಲನೆಯದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಕಲೆಯ ಬಗ್ಗೆ ಇರುವ ಕಾಳಜಿ ಹಾಗೂ ಕಲಾವಿದರಾಗಿ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದ ಎಂದರು.
ಕೊರಗಜ್ಜ ಗೆಲ್ಲಿಸ್ತಾನೆ ಎಂದು ನಂಬಿದ್ದೆ: ಎರಡನೇಯದು ಪೊಲೀಸ್ ಇಲಾಖೆಯ ಮೇಲೆ ಇರುವ ಗೌರವಕ್ಕೆ. ನಿನ್ನೆ ಮಂಗಳೂರಿಗೆ ಬಂದಾಗ ಕೊರಗಜ್ಜನ ಗುಡಿಗೆ ಹೋಗಬೇಕಿತ್ತು. ಕೊರಗಜ್ಜ ಗೆಲ್ಲಿಸ್ತಾನೆ ಎಂದು ಬಿಗ್ಬಾಸ್ನಲ್ಲಿ ನಂಬಿದ್ದೆ. ಗೆಳೆಯರು ಮಂಗಳೂರಿನಿಂದ ಕೊರಗಜ್ಜನ ಗುಡಿಗೆ ಜಾಥಾ ಮಾಡುವ ಎಂದಿದ್ದರು. ಆದರೆ ಅನುಮತಿ ಸಿಗವುದಿಲ್ಲ ಎಂದು ಅಂದುಕೊಂಡಿದ್ದೆ. ಮಂಗಳೂರು ಪೊಲೀಸ್ ಕಮಿಷನರ್ ಅವರು ಅನುಮತಿ ಕೊಡಿಸಿ ಯಾವುದೇ ತೊಂದರೆಯಾಗದಂತೆ ನೋಡಿದ್ದಾರೆ.
ಮೂರನೇಯದು ಸಣ್ಣ ಕಲಾವಿದನಾಗಿದ್ದ ವೇಳೆ ಮಧ್ಯರಾತ್ರಿ ಬರುತ್ತಿದ್ದಾಗ ಪೊಲೀಸರು ನೀಡುತ್ತಿದ್ದ ಗೌರವ. ಮಂಗಳೂರು ಪೊಲೀಸರು ಯಾರಿಗೆ ರೆಸ್ಪೆಕ್ಟ್ ಕೊಡಬೇಕೋ ಅವರಿಗೆ ಕೊಟ್ಟೆ ಕೊಡುತ್ತಾರೆ ಎಂದು ಹೇಳಿದರು. ಇದೇ ವೇಳೆ, ರೂಪೇಶ್ ಶೆಟ್ಟಿ ಬುದ್ದಿವಂತರು , ಬುದ್ದಿವಂತರು, ನಾವು ಬುದ್ದಿವಂತ ದಡ್ಡರು ...ಎಂಬ ಹಾಡು ಹೇಳುವ ಮೂಲಕ ಮನರಂಜಿಸಿದರು.
ಇದನ್ನೂ ಓದಿ: ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ: ಕೊರಗಜ್ಜ ದೈವದ ಸ್ಮರಣೆ