ಮಂಗಳೂರು: ನಗರದ ಜ್ಯುವೆಲ್ಲರಿಯಲ್ಲಿ ನಡೆದಿರುವ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕದ್ರಿ ಪೊಲೀಸರು ಬಜರಂಗದಳದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಶಿಬಿನ್, ಗಣೇಶ್, ಪ್ರಕಾಶ್ ಮತ್ತು ಚೇತನ್ ಬಂಧಿತ ಬಜರಂಗದಳದ ಕಾರ್ಯಕರ್ತರು. ಇವರು ಇತ್ತೀಚೆಗೆ ನಗರದ ಕಂಕನಾಡಿಯ ಜ್ಯುವೆಲ್ಲರಿಯೊಂದಕ್ಕೆ ನುಗ್ಗಿ ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸಕ್ಕಿದ್ದ ಯುವತಿ ಅದೇ ಜ್ಯುವೆಲ್ಲರಿಯಲ್ಲಿ ನೌಕರನಾಗಿದ್ದ ಅನ್ಯಕೋಮಿನ ಯುವಕನೊಂದಿಗೆ ಬೈಕ್ನಲ್ಲಿ ಓಡಾಡುತ್ತಿದ್ದಾಳೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಡಿಸೆಂಬರ್ 6ರಂದು ಜ್ಯುವೆಲ್ಲರಿಗೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರ ಮುಂಭಾಗವೇ ಬಜರಂಗದಳದ ಕಾರ್ಯಕರ್ತರು ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿತ್ತು. ಇಂದು ಯುವಕನಿಗೆ ಹಲ್ಲೆ ಮಾಡಿದ ನಾಲ್ವರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಓದಿ: ಪೊಲೀಸರಿಂದ ಬೆದರಿಕೆ ಆರೋಪ: ಶ್ರೀರಂಗಪಟ್ಟದಲ್ಲಿ ರಾತ್ರಿಯಿಡೀ ಹಿಂದೂ ಕಾರ್ಯಕರ್ತರ ಪ್ರತಿಭಟನೆ