ಬೆಳ್ತಂಗಡಿ (ದಕ್ಷಿಣ ಕನ್ನಡ) : ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಎರ್ಮಾಳ ಪಲ್ಕೆ ನಿವಾಸಿ ಐತಪ್ಪ ನಲಿಕೆ ಎಂಬವರ ಮಗ ಬಾಬಿ (48) ಎಂಬಾತನಿಗೆ 50 ಸಾವಿರ ರೂಪಾಯಿ ದಂಡ ಹಾಗು 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಕಡಿರುದ್ಯಾವರ ಗ್ರಾಮದ ಎರ್ಮಳ ಮಠ ಎಂಬಲ್ಲಿ 2021 ಡಿ. 19 ರಂದು ಬಾಲಕಿ ಮೇಲೆ ಈತ ಲೈಂಗಿಕ ಸಂಪರ್ಕ ನಡೆಸಿದ್ದನು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 03/2022 ರಂದು ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸರು ಕಲಂ 4 ಮತ್ತು 6 ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಮತ್ತು ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಾಟ್ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ .ಬಿ. ಅವರು ತನಿಖೆ ನಡೆಸಿದ್ದರು. ಆರೋಪಿ ಬಾಬಿ (48) ಎಂಬಾತನನ್ನು ಬಂಧಿಸಿ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ -2 (ಪೋಕ್ಸೋ) ಇದರ ನ್ಯಾಯಾಧೀಶ ರಾಧಾಕೃಷ್ಣ ಅವರು ಜ.24 ರಂದು ಅಪರಾಧಿಗೆ 20 ವರ್ಷಗಳ ಕಾರಾಗೃಹ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಹಣ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವುದಾಗಿಯೂ ಆದೇಶದಲ್ಲಿ ತಿಳಿಸಿದ್ದಾರೆ. ನಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಪ್ರಕರಣಗಳ ತನಿಖಾ ಸಹಾಯಕರಾಗಿ ಹೆಡ್ ಕಾನ್ಸ್ಟೇಬಲ್ ವಿಜಯಕುಮಾರ್ ರೈ ಕಾರ್ಯನಿರ್ವಹಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟ್ರಮಣ ಸ್ವಾಮಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಸುಳ್ಳು ಹೇಳಿ ಸ್ನೇಹಿತರಿಂದ ಅತ್ಯಾಚಾರ: ನಾಗ್ಪುರದ ಸವ್ನೆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಆಕೆ ನಂಬಿದ್ದ ಸ್ನೇಹಿತರೇ ಅತ್ಯಾಚಾರವೆಸೆಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿ 10 ನೇ ತರಗತಿಯಲ್ಲಿ ಓದುತ್ತಿದ್ದು ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಗೆ ತನ್ನ ಸ್ನೆಹಿತೆಯಿಂದ 2 ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಗೆಳೆಯರಿಬ್ಬರು ಸಿಕ್ಕಿದ್ದಾರೆ. ಅವರು, ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಪರಿಚಯವಿದ್ದುದರಿಂದ ಬಾಲಕಿ ಇಬ್ಬರನ್ನು ನಂಬಿ ಕಾರು ಹತ್ತಿ ಕುಳಿತಿದ್ದಾಳೆ. ಆದರೆ ಆರೋಪಿಗಳು ಆಕೆಯನ್ನು ಮನೆಗೆ ಬಿಡದೆ ನೇರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಅಲ್ಲೇ ಬಿಟ್ಟು ಇಬ್ಬರೂ ಪರಾರಿಯಾಗಿದ್ದರು. ಘಟನೆಯ ನಂತರ ಬಾಲಕಿ ತನ್ನ ಮನೆಗೆ ತೆರಳಿ ಎಲ್ಲಾ ವಿಷಯವನ್ನೂ ತಾಯಿಯ ಬಳಿ ವಿವರಿಸಿದ್ದಳು. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ