ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರ ಪರ್ವತದ ಬಳಿ ಕಣ್ಮರೆಯಾಗಿದ್ದ ಬೆಂಗಳೂರು ಮೂಲದ ಚಾರಣಿಗ ಸಂತೋಷ್ ಇಂದು ಪತ್ತೆಯಾಗಿದ್ದಾರೆ.
ಬೆಂಗಳೂರಿನಿಂದ 12 ಜನ ಯುವಕರ ತಂಡ ಚಾರಣಕ್ಕೆ ಬಂದಿದ್ದ ಸಂದರ್ಭ ಸೆ.15ರಂದು ಕುಮಾರ ಪರ್ವತದ ಗಿರಿಗದ್ದೆ ಎಂಬಲ್ಲಿ ನಾಪತ್ತೆಯಾಗಿದ್ದರು. ಪರ್ವತದಲ್ಲಿ ಚಾರಣ ಮಾಡುತ್ತಿದ್ದ ವೇಳೆ ಸಂತೋಷ್ ದಾರಿ ತಪ್ಪಿದ್ದರು. ಕುಮಾರ ಪರ್ವತದ ಬಳಿಯ ಗುಡ್ಡದಿಂದ ಕುಕ್ಕೆ ದೇವಾಲಯಕ್ಕೆ ತೀರ್ಥದ ಉದ್ದೇಶದಿಂದ ಪೈಪ್ ಲೈನ್ ಮಾಡಲಾಗಿದ್ದು, ಇದರ ಆಧಾರದ ಮೇಲೆಯೇ ಯುವಕ ಇಂದು ಆದಿ ಸುಬ್ರಹ್ಮಣ್ಯ ದೇವಸ್ಥಾನ ತಲುಪಿದ್ದಾರೆ.
ಸಂತೋಷ್ ನಾಪತ್ತೆಯಾದ ಬಗ್ಗೆ ಸೋಮವಾರ ಸಂಜೆ ಪ್ರಕರಣ ದಾಖಸಿಕೊಂಡಿದ್ದ ಸುಬ್ರಹ್ಮಣ್ಯ ಠಾಣಾ ಪೊಲೀಸರು ಇಂದು ಬೆಳಗ್ಗೆ 6 ಗಂಟೆಯಿಂದ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಜಂಟಿಯಾಗಿ ಐದು ತಂಡಗಳಾಗಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಅಲ್ಲದೆ ಸ್ಥಳೀಯ ಕೆಲವು ಉತ್ಸಾಹಿ ತರುಣರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆದರೆ ಆ ಸಮಯಕ್ಕೆ ಸಂತೋಷ್ ದೇವಾಲಯಕ್ಕೆ ಅಳವಡಿಸಲಾಗಿರುವ ತೀರ್ಥದ ಪೈಪನ್ನು ಆಧಾರವಾಗಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯವನ್ನು ತಲುಪಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.