ಮಂಗಳೂರು: ಶ್ರೀ ಕಾರಿಂಜೇಶ್ವರ ಕ್ಷೇತ್ರದ ಸುತ್ತ ಮುತ್ತ ಗಣಿಗಾರಿಕೆ ನಡೆಯಬಾರದೆಂಬ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಬಗ್ಗೆ ಸರ್ಕಾರ ಕಾರಿಂಜೇಶ್ವರ ಕ್ಷೇತ್ರವನ್ನು ‘ಧಾರ್ಮಿಕ ಸೂಕ್ಷ್ಮವಲಯ’ ಎಂದು ಘೋಷಿಸಿ ಗಣಿಗಾರಿಕೆ ನಡೆಸಬಾರೆಂಬ ಆದೇಶವನ್ನು ಹೊರಡಿಸಿದೆ.
ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕಾರಿಂಜೇಶ್ವರ ಕ್ಷೇತ್ರದ ಎರಡು ಕಿ.ಮೀ ವ್ಯಾಪ್ತಿಯನ್ನು ‘‘ಧಾರ್ಮಿಕ ಸೂಕ್ಷ್ಮವಲಯ’’ ಎಂದು ಘೋಷಿಸಿ ಗಣಿಗಾರಿಕೆ ನಿಷೇಧ ಮಾಡಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಕಾರಿಂಜ ದೇವಾಲಯದ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿರುವುದರಿಂದ ದೇವಸ್ಥಾನಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ನಿರಂತರವಾಗಿ ಪ್ರತಿಭಟನೆ ಮತ್ತು ಹೋರಾಟಗಳನ್ನು ನಡೆಸಿಕೊಂಡು ಬಂದಿತ್ತು.
ಇದೀಗ ಸರ್ಕಾರ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 8(3) ರಲ್ಲಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ಸರ್ಕಾರವು ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ವ್ಯಾಪ್ತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಎರಡು ಕಿಲೋ ಮೀಟರ್ ಸುತ್ತಳತೆಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಕಾಯ್ದಿರಿಸಿ ಆದೇಶಿಸಿದೆ. ಎಲ್ಲ ರೀತಿಯ ಗಣಿಗಾರಿಕೆ ಮತ್ತು ಕಲ್ಲುಪುಡಿ ಚಟುವಟಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಹಿಂದೂ ಜಾಗರಣ ವೇದಿಕೆಯು ಕಳೆದ 14 ವರ್ಷಗಳ ನಿರಂತರ ಹೋರಾಟದ ಫಲವಾಗಿ ಶ್ರೀ ಕಾರಿಂಜೇಶ್ವರ ಕ್ಷೇತ್ರದ 2 ಕಿ.ಮೀ ವ್ಯಾಪ್ತಿಯನ್ನು ‘‘ಧಾರ್ಮಿಕ ಸೂಕ್ಷ್ಮವಲಯ’’ ಎಂದು ಘೋಷಿಸಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಈ ಆದೇಶ ಹೊರ ಬೀಳುವಲ್ಲಿ ಸಹಕರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರುಗಳಾದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಹೋರಾಟಗಳಿಗೆ ಮಾರ್ಗದರ್ಶನ ನೀಡಿದ ಹಿ.ಜಾ.ವೇ.ಯ ಮುಖಂಡರಾದ ಜಗದೀಶ ಕಾರಂತ್ ಅವರಿಗೆ ಹಿಂ ಜಾ ವೇ ಬಂಟ್ವಾಳ ಅಧ್ಯಕ್ಷರಾದ ತಿರುಲೇಶ್ ಬೆಳ್ಳೂರು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಯುಗಾದಿಗೂ ಮುನ್ನಾ ದಿನ ಕೆಎಸ್ಆರ್ಟಿಸಿ ನೌಕರರಿಂದ ಮುಷ್ಕರ: ಹಬ್ಬಕ್ಕೆ ತೆರಳುವವರಿಗೆ ತಟ್ಟಲಿದೆ ಮುಷ್ಕರದ ಬಿಸಿ
ಪೇಜಾವರ ಶ್ರೀಗಳಿಂದ ಮನವಿ: ಶ್ರೀ ಕಾರಿಂಜೇಶ್ವರ ಪರಿಸರದಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ದೇವಾಲಯ ಮತ್ತು ಸುತ್ತಮುತ್ತಿಲಿನ ಪರಿಸರ ಹಾನಿಗೆ ಉಡುಪಿಯ ಪೇಜಾವರ ಶ್ರೀಗಳು ಕಳವಳ ವ್ಯಕ್ತಪಡಿಸಿದ್ದರು. ಇಂತಹ ಪವಿತ್ರ ಕ್ಷೇತ್ರಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಸಂರಕ್ಷಿಸುವುದು ಸಮಸ್ತ ಹಿಂದೂ ಸಮಾಜದ ಹೊಣೆ. ಕೂಡಲೇ ಪರವಾನಗಿ ರದ್ದುಗೊಳಿಸಲು ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಈ ಹಿಂದೆ ಉಡುಪಿಯ ಪೇಜಾವರ ಮಠದ ಶ್ರೀಗಳು ಒತ್ತಾಯಿಸಿದ್ದರು.
ಗಣಿಗಾರಿಕೆಯಿಂದಾಗಿ ಭಾಗಶಃ ಹಾನಿಯಾಗಿದ್ದು, ದೇವಾಲಯದ ಶಿಲೆಗಳು ಬಿರುಕು ಬಿಟ್ಟಿವೆ. ಹಾಗಾಗಿ, ಇಂತಹ ಪವಿತ್ರ ಕ್ಷೇತ್ರಕ್ಕೆ ಕಿಂಚಿತ್ತು ಧಕ್ಕೆಯಾಗದಂತೆ ಸಂರಕ್ಷಿಸುವುದು ಸಮಸ್ತ ಹಿಂದೂ ಸಮಾಜದ ಹೊಣೆಯಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: 5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗೆ ಅವಕಾಶ ನೀಡಿದ ಹೈಕೋರ್ಟ್