ಕಡಬ: ತಮ್ಮನ ಪತ್ನಿಗೆ ಆ್ಯಸಿಡ್ ಎರಚಿ ಕೊಲೆಗೆ ಯತ್ನಿಸಿದ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜನವರಿಯಲ್ಲಿ ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಆ್ಯಸಿಡ್ ದಾಳಿಯ ಪ್ರಕರಣ ನಡೆದಿತ್ತು. ದೇಶೀಯ ಮಟ್ಟದಲ್ಲೇ ಈ ಘಟನೆ ಭಾರೀ ಸುದ್ದಿಯಾಗಿತ್ತು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಫೋನ್ ಕರೆ ಸ್ವೀಕರಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಕಡಬ ಠಾಣಾ ಪೊಲೀಸ್ ಅಧಿಕಾರಿಯೋರ್ವರು ಕೆಲವು ತಿಂಗಳುಗಳ ಕಾಲ ಅಮಾನತು ಕೂಡಾ ಆಗಿದ್ದರು.
ತನ್ನ ತಮ್ಮನ ಪತ್ನಿ ಸ್ವಪ್ನ ಮತ್ತು ಸ್ವಪ್ನ ಅವರ ಪುಟ್ಟ ಮಗು ಮೇಲೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಕೋಡಿಂಬಾಳ ಕೊಠಾರಿ ನಿವಾಸಿ ಜಯಾನಂದ ಎಂಬಾತನನ್ನು ಕಡಬ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ಆರೋಪಿ ಜಯಾನಂದ ಇದುವರೆಗೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. ಇದೀಗ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.