ಬಂಟ್ವಾಳ(ದಕ್ಷಿಣ ಕನ್ನಡ): ನಾಪತ್ತೆಯಾದ ಬಾಲಕಿಯರನ್ನು ಹುಡುಕಿಕೊಂಡು ಬಂದ ಯುವಕರು ಬಸ್ ನಿಲ್ದಾಣದಲ್ಲಿ ನಿಂತಿದ್ದ ಬುರ್ಖಾ ಧರಿಸಿದ್ದ ಯುವತಿಯರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಬಸ್ ನಿಲ್ದಾಣದಲ್ಲಿ ಕುದ್ದುಪದವು ಮೂಲದ ಇಬ್ಬರು ಯುವತಿಯರು ಹಲ್ಲೆಗೊಳಗಾಗಿದ್ದಾರೆ. ಗಾಯಗೊಂಡ ಇಬ್ಬರು ಯುವತಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಹಲ್ಲೆ ನಡೆಸಿದವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ವಿವರ: ಮುಸ್ಲಿಂ ಸಮುದಾಯದ ಇಬ್ಬರು ಬಾಲಕಿಯರು ಇತ್ತೀಚೆಗೆ ಮನೆ ಬಿಟ್ಟು ತೆರಳಿದ್ದರು. ಅವರನ್ನು ಹುಡುಕಿಕೊಂಡು ಅವರ ಊರಿನ ಯುವಕರು ಹೊರಟಿದ್ದಾರೆ. ಆದರೆ ನಾಪತ್ತೆಯಾದವರೇ ಎಂದು ಭಾವಿಸಿ ಬಸ್ ನಿಲ್ದಾಣದಲ್ಲಿ ಸಿಕ್ಕ ಬೇರೆ ಅಮಾಯಕ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಸಾಲೆತ್ತೂರು ಮೂಲದ ಬಾಲಕಿಯೊಬ್ಬಳು ಮನೆಯಿಂದ ಸ್ನೇಹಿತೆಯೊಂದಿಗೆ ತೆರಳಿದ್ದಳು. ಆಕೆಯನ್ನು ಹುಡುಕುತ್ತ ವಿಟ್ಲಕ್ಕೆ ಬಂದಿದ್ದ ಯುವಕರು ಬಸ್ ನಿಲ್ದಾಣದಲ್ಲಿ ನಿಂತಿದ್ದ ಇಬ್ಬರು ಬುರ್ಖಾಧಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬುರ್ಖಾ ತೆರೆದಾಗ ಅವರು ಬೇರೆಯವರು ಎಂಬುದು ಗೊತ್ತಾಗಿದೆ. ಸಾರ್ವಜನಿಕರು ನೈತಿಕ ಪೊಲೀಸ್ ಗಿರಿ ನಡೆಸಿದವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಉದ್ವಿಗ್ನ ಸ್ಥಿತಿ.. ಉಕ್ರೇನ್ಗೆ ತೆರಳದಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ