ಬೆಳ್ತಂಗಡಿ(ದಕ್ಷಿಣ ಕನ್ನಡ): ಆದಿವಾಸಿ ಸಮುದಾಯದ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಉಜಿರೆಯ ಗುರಿಪಳ್ಳದಲ್ಲಿ ಜಾಗದ ವಿಚಾರದಲ್ಲಿ ಹಲ್ಲೆ ನಡೆಸಲಾಗಿದ್ದು, ಏಪ್ರಿಲ್ 21ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ 143, 147, 148, 323, 324, 504, 354, 354(B), 506 ಜೊತೆಗೆ 149 ಸೆಕ್ಷನ್ಗಳ ಅಡಿ ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿ, ಬಟ್ಟೆ ಹರಿದು, ಮಾನ ಹಾನಿ ಮಾಡಿದ ಆರೋಪದಲ್ಲಿ ಮೂರು ಮಹಿಳಾ ಆರೋಪಿಗಳಾದ ಸುಗುಣ, ಕುಸುಮ, ಲಲಿತಾ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಈಗ ಮಧ್ಯಂತರ ಜಾಮೀನು ಮಂಜೂರಾಗಿದೆ.
ಪ್ರಕರಣದ ವಿವರ: ಏಪ್ರಿಲ್ 19ರಂದು ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಜಾಗದ ಅಳತೆಗೆ ಎಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಜಾಗದ ಬಗ್ಗೆ ಇನ್ನೊಂದು ಕುಟುಂಬ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದವರು ಅಳತೆ ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆಗ ತಡೆಯಲು ಬಂದ ಇನ್ನಿತರರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ದೌರ್ಜನ್ಯಕ್ಕೀಡಾದ ಮಹಿಳೆ ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪತಿ, ನಾದಿನಿ ಕಿರುಕುಳ ಆರೋಪ: ಚಾಮರಾಜನಗರದ ಫಿಸಿಯೋ ಥೆರಪಿಸ್ಟ್ ಆತ್ಮಹತ್ಯೆ