ಮಂಗಳೂರು: ನಗರದ ಕೋಟೆಕಾರು ಗ್ರಾಮದ ಅಜ್ಜಿನಡ್ಕ ಮುಳ್ಳುಗುಡ್ಡೆ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುತ್ತಾರು, ಮದನಿ ನಗರದ ಮುನ್ನೂರು ಗ್ರಾಮದ ನಿವಾಸಿ ಹಂಝ ಫವಾಹಿದ್(25), ಸೋಮೇಶ್ವರ ಉಚ್ಚಿಲ ನಿವಾಸಿ ಉಮರ್ ಫಾರೂಕ್ (25) ಬಂಧಿತ ಆರೋಪಿಗಳು.
ಇಬ್ಬರೂ ಆರೋಪಿಗಳು ನಗರದ ಕೋಟೆಕಾರು ಗ್ರಾಮದ ಅಜ್ಜಿನಡ್ಕ ಮುಳ್ಳುಗುಡ್ಡೆ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಸಂದರ್ಭ ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಹಾಗೂ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 150 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1,500 ರೂ. ಆಗಿರಬಹುದೆಂದು ಅಂದಾಜಿಸಲಾಗಿದೆ.ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.