ಮಂಗಳೂರು (ದಕ್ಷಿಣ ಕನ್ನಡ) : ಕಾರು ಮತ್ತು ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಎಎಸ್ಐಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಶಕ್ತಿನಗರದ ನಿವಾಸಿ ಪುನೀತ್ ಶೆಟ್ಟಿ (35) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣ: ಕಾರೊಂದು ಬೈಕ್‌ಗೆ ತಾಗಿದ ವಿಚಾರದಲ್ಲಿ ಕಾರು ಚಾಲಕ ಪುನೀತ್ ಶೆಟ್ಟಿ ಮತ್ತು ಬೈಕ್ ಸವಾರನ ಮಧ್ಯೆ ವಾಗ್ವಾದ ನಡೆದಿದೆ. ಈ ಕೋಪದ ಭರದಲ್ಲಿ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಉರ್ವ ಠಾಣೆಯ ಎಎಸ್ಐಗೆ ಕರೆ ಮಾಡಿದ ಪುನೀತ್ ಶೆಟ್ಟಿ ಆರೋಪಿ ಬೈಕ್ ಸವಾರನನ್ನು ಬಂಧನ ಮಾಡಲು ಒತ್ತಾಯಿಸಿದ್ದಾನೆ.
ಈ ಸಂದರ್ಭ ಎಎಸ್ಐ ಸ್ಪಷ್ಟನೆ ನೀಡಿದರೂ ಕೇಳಿಸಿಕೊಳ್ಳದ ಪುನೀತ್ ಶೆಟ್ಟಿ 'ಆತನನ್ನು ಬಂಧಿಸದಿದ್ದರೆ ಕಮಿಷನರ್‌ಗೆ ಹೇಳಿ ವರ್ಗಾವಣೆ ಮಾಡಿಸುತ್ತೇನೆ' ಎಂದು ಹೇಳಿದ್ದಲ್ಲದೇ, ಸುಮಾರು 8 ನಿಮಿಷಗಳ ಸಂಭಾಷಣೆ ನಡೆಸಿ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಎಎಸ್ಐಗೆ ಬೆದರಿಕೆ ಹಾಕಿದ್ದಾನೆ. ಆರೋಪಿ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಫೋನ್ ಮೂಲಕ ಬೆದರಿಕೆ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಬಂಧಿತನಿಂದ ಪರವಾನಗಿ ಇರುವ ಪಿಸ್ತೂಲು ಹಾಗೂ 6 ಸಜೀವ ಗುಂಡು, 2 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪುನೀತ್ ಶೆಟ್ಟಿ ವಿರುದ್ಧ ಬರ್ಕೆ, ಪಾಂಡೇಶ್ವರ, ಬಂದರು, ಉರ್ವ, ಕಂಕನಾಡಿ ನಗರ ಠಾಣೆಯಲ್ಲಿ ನಾನಾ ಪ್ರಕರಣ ದಾಖಲಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಪುನೀತ್ ಶೆಟ್ಟಿಯು ಪರವಾನಗಿ ಹೊಂದಿದ್ದ ಪಿಸ್ತೂಲನ್ನು ಹೊಂದಿದ್ದಾನೆ.
ಹಾಗಾಗಿ ಉರ್ವ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ, ಆರೋಪಿಯ ಪಿಸ್ತೂಲು ಪರವಾನಗಿ ರದ್ದು ಮಾಡಲು ಮೇಲಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಆರೋಪಿ ಪುನೀತ್ ಶೆಟ್ಟಿ ಒಂದು ರಾಜಕೀಯ ಪಕ್ಷದಲ್ಲಿದ್ದು, ಈತ ಪಕ್ಷದ ಶಿಸ್ತು ಉಲ್ಲಂಘಿಸಿ ವರ್ತಿಸಿದ ಆರೋಪದ ಮೇರೆಗೆ ಅಮಾನತುಗೊಂಡಿದ್ದ ಎಂದು ತಿಳಿದು ಬಂದಿದೆ.
ಮಂಗಳೂರಿನಲ್ಲಿ ಡ್ರಗ್ ಪೆಡ್ಲರ್ಗಳ ಬಂಧನ: ನಗರದಲ್ಲಿ ಮಾದ ವಸ್ತು ಎಂಡಿಎಂಎಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂಡುಶೆಡ್ಡೆ ಗ್ರಾಮದ ಶಿವನಗರದ ಮೊಹಮ್ಮದ್ ಇಮ್ರಾನ್ (36), ಉಡುಪಿ ಜಿಲ್ಲೆಯ ಮಣಿಪಾಲದ ಬಡಗಬೆಟ್ಟು ನಿವಾಸಿ ಅಮ್ಜತ್ ಖಾನ್ (42), ಮಂಗಳೂರಿನ ಮಂಜನಾಡಿಯ ಅಬ್ದುಲ್ ಬಶೀರ್ ಅಬ್ಬಾಸ್(39) ಬಂಧಿತ ಆರೋಪಿಗಳು.
ಇದನ್ನೂ ಓದಿ: Mangaluru crime: ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ; ಆರೋಪಿ ಬಂಧನ