ಬೆಳ್ತಂಗಡಿ: ರಾಜಕೇಸರಿ ಸಂಸ್ಥೆ ಹಾಗೂ ಸುವರ್ಣ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಹಾಗೂ ಅನುಗ್ರಹ ಜನಸೇವಾ ಕೇಂದ್ರದ ಸಹಕಾರದಲ್ಲಿ ಆರೋಗ್ಯ ಸೇತು ಆ್ಯಪ್ ಮತ್ತು ಸರ್ಕಾರದ ಕಾರ್ಮಿಕ ಕಾರ್ಡ್ ಮಾಹಿತಿ ಕಾರ್ಯಾಗಾರವನ್ನು ತಾಲೂಕಿನ ಸುವರ್ಣ ಆರ್ಕೇಡ್‌ನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಬಳಿಕ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ಕೋವಿಡ್-19 ಸೋಂಕಿನ ಸುರಕ್ಷತೆಗಾಗಿ ಎಲ್ಲರೂ ಆರೋಗ್ಯ ಸೇತು ಆ್ಯಪ್ ಬಳಸಿಕೊಳ್ಳಬೇಕು. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ರಾಜಕೇಸರಿ ಸಂಸ್ಥೆ ಹಾಗೂ ಸಾಂಸ್ಕ್ರತಿಕ ಪ್ರತಿಷ್ಠಾನ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪತ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿ ಮುಂಡಾಜೆ ಆಗಮಿಸಿದ್ದರು. ತಾಲೂಕು ಆರೋಗ್ಯ ಕಾರ್ಯಕ್ರಮದ ವ್ಯವಸ್ಥಾಪಕರಾದ ಅಜಯ್‌ಕುಮಾರ್, ಅನುಗ್ರಹ ಜನಸೇವಾ ಕೇಂದ್ರದ ಸಲ್ಹತ್, ರಾಜಕೇಸರಿ ತಾಲೂಕು ಕಾರ್ಯದರ್ಶಿ ಅನಿಲ್ ಭಾಗವಹಿಸಿದ್ದರು. ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುವರ್ಣ ಪ್ರತಿಷ್ಠಾನದ ವತಿಯಿಂದ ಮಾಸ್ಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.