ಪುತ್ತೂರು(ದಕ್ಷಿಣ ಕನ್ನಡ): ಪ್ರಸ್ತುತ ಅಡಿಕೆ ವಿಚಾರ ಕುರಿತು ಇರುವ ಎಲ್ಲಾ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ರೈತರು ಅಡಿಕೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಮುಂದೆ ಬರಬೇಕು ಎಂದು ಅಡಿಕೆ ಉತ್ಪನ್ನಗಳ ಸಂಶೋಧಕ, ಪ್ರಗತಿಪರ ಕೃಷಿಕ ಬದನಾಜೆ ಶಂಕರ ಭಟ್ ಹೇಳಿದರು.
ಮಂಗಳವಾರ ತೆಂಕಿಲ ಒಕ್ಕಲಿಗ ಸಭಾಭವನದ ಚುಂಚಶ್ರೀ ಸಭಾಭವನದಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಹಕಾರ ಸಂಘ ಹಾಗೂ ಅಡಿಕೆ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಅಡಕೆ ಹೊಸ ಬಳಕೆ ಕುರಿತು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಆಪಾದನೆಯನ್ನು ಹೊತ್ತುಕೊಂಡಿದೆ. ಅಡಿಕೆ ನಿಷೇಧಕಾರಿ ಎನ್ನುವ ವಿಷಯ ಅಡಿಕೆ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಅಪವಾದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಅಡಿಕೆಯಿಂದ ಹೊಸ ಹೊಸ ಆವಿಷ್ಕಾರಗಳು ನಡೆದು ಆಹಾರ ಉತ್ಪನ್ನವಾಗಿ ಬಳಸಲು ಪ್ರತೀ ರೈತರು ತಮ್ಮ ಮನೆಯ ಅಡುಗೆ ಮನೆಯನ್ನೇ ಉತ್ಪನ್ನದ ಫ್ಯಾಕ್ಟರಿಯಾಗಿ ಬಳಕೆ ಮಾಡಲು ಆಸಕ್ತಿ ವಹಿಸಬೇಕಾಗಿದೆ.
ಈಗಾಗಲೇ ಅಡಿಕೆ ಕ್ಯಾನ್ಸರ್ ನಿವಾರಿಸುವಲ್ಲಿ ಔಷಧವಾಗಿ ಬಳಕೆಯಾಗುತ್ತಿದೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ವಿವಿಧ ಅಡಿಕೆ ಉತ್ಪನ್ನಗಳು: ಕಾರ್ಯಕ್ರಮದಲ್ಲಿ ಅಡಿಕೆ ಮರ ಹಾಗೂ ಅಡಿಕೆಯಿಂದ ತಯಾರಿಸಿದ ವಿವಿಧ ಉತ್ಪನ್ನಗಳಾದ ಕೀ ಚೈನ್, ಅಡಿಕೆ ಬಣ್ಣದ ರವಿಕೆ ಕಣ, ಅಡಿಕೆ ಚೊಗರು, ಬುಗುರಿ, ಅಡಿಕೆ ಬಣ್ಣದ ರ್ಯಾಟ್ಲರ್, ಟೀದರ್, ಸೊಳ್ಳೆಬತ್ತಿ, ಪೂಗ ಸಿಂಗಾರ್ ಸಾಬೂನು, ಪೂಗಸ್ವಾದ ಸಿರಪ್, ಸತ್ವಮ್ ಸಾಬೂನು, ಪೂಗ ಟೈಮರ್ ವೈಟ್‍ಲಾಸ್ ಸಿರಪ್ ಮುಂತಾದ ಹಲವಾರು ಉತ್ಪನ್ನಗಳ ಪ್ರದರ್ಶನ ಮಳಿಗೆ ನೆರೆದಿದ್ದ ವೀಕ್ಷಕರ ಗಮನ ಸೆಳೆಯಿತು. ಮಾರಾಟವೂ ನಡೆಯಿತು.
ಸಭೆಯ ವೇದಿಕೆಯಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ನ ದೇವಿಪ್ರಸಾದ್ ಪುಣಚ, ಸಿಪಿಸಿಆರ್ಐ ವಿಜ್ಞಾನಿ ವಿನಾಯಕ ಹೆಗ್ಡೆ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ರೈ, ಪಡಾರು ರಾಮಕೃಷ್ಣ ಶಾಸ್ತ್ರಿ, ಅಡಿಕೆ ಪತ್ರಿಕೆ ಮುಖ್ಯ ಸಂಪಾದಕ ಶ್ರೀಪಡ್ರೆ, ಸರಸ್ವತಿ ಸೊಸೈಟಿಯ ಜನರಲ್ ಮ್ಯಾನೇಜರ್ ವಸಂತ, ಅಡಿಕೆ ಬೆಳೆಗಾರರ ಸಂಘದ ಸದಸ್ಯ ಮಹೇಶ್ ಪುಚ್ಚಪ್ಪಾಡಿ ಸಮಾರಂಭದಲ್ಲಿ ವಿವಿಧ ಜಿಲ್ಲೆಗಳ ಅಡಿಕೆ ಬೆಳೆಗಾರರು, ರೈತರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿ ಎಲ್ ಸಂತೋಷ್ ಭೇಟಿ