ಮಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ.ಎಚ್. ಜಾಕೋಬ್ ಲೋಬೋರವರ ಜೀವನ ಹಾಗೂ ಸಾಧನೆಯನ್ನು ತಿಳಿಸುವ "ಅನುಭೂತಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಲೇಖಕ ಶ್ರೀನಿವಾಸ ಕೌಶಿಕ್ ಅವರು ಬರೆದಿರುವ ಬೆಂಗಳೂರಿನ ಅನಂತ ಪ್ರಕಾಶನದ ಉಮೇಶ್ ನಾಗಮಂಗಲ ಅವರು ಪ್ರಕಟಿಸಿರುವ "ಅನುಭೂತಿ" ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ್ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ್ ಕುಮಾರ್ ಕಲ್ಕೂರ, ಸ್ವಾತಂತ್ರ್ಯ ಪೂರ್ವದಲ್ಲೇ ಜನಿಸಿರುವ ಜಾಕೋಬ್ ಲೋಬೋ ಅವರು ತಾನೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಬಡವರ ಸೇವೆ ಮಾಡಿದಂತವರು. ಅಂದಿನ ಕಾಲದ ಹಿಂದುಳಿದ ಬಡ ಕುಟುಂಬಗಳಿಗೆ ಅವರು ಮಾಡಿರುವ ಸೇವೆ ಸ್ಮರಣೀಯ. ಇಂಥ ಮಹಾನ್ ಸಾಧಕನ ಜೀವನ ಹಾಗೂ ಸಾಧನೆಯನ್ನು ತಿಳಿಸುವ ಪುಸ್ತಕ ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಲೇಖಕ ಶ್ರೀನಿವಾಸ ಕೌಶಿಕ್, ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಆರ್. ಶ್ರೀನಿವಾಸ್, ಹೆಲನ್ ಲೋಬೋ ಮುಂತಾದವರು ಉಪಸ್ಥಿತರಿದ್ದರು.