ಮಂಗಳೂರು: ನಗರದ ಮುಲ್ಕಿ ಸಮೀಪದ ಇಂದಿರಾ ನಗರದಲ್ಲಿ ಮಂಗಳವಾರ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತೇಶ್(6) ಮೃತ ಬಾಲಕ. ಇಂದಿರಾ ನಗರ ಬೊಳ್ಳೂರಿನ ಮಸೀದಿ ಹಿಂಭಾಗದ ಖಾಸಗಿ ಜಾಗದಲ್ಲಿ ಮಂಗಳವಾರ ಸಂಜೆ ನಿಹಾನ್ (5) ಹಾಗೂ ಮಾರುತೇಶ್ ಆಟವಾಡುತ್ತಿದ್ದರು. ಈ ಸಂದರ್ಭ ಸಿಡಿಲು ಬಡಿದಿದ್ದು, ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಮಕ್ಕಳಿಬ್ಬರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ನಿಹಾನ್ ಮೃತಪಟ್ಟಿದ್ದನು. ಕೋಮಾ ಸ್ಥಿತಿಯಲ್ಲಿದ್ದ ಮಾರುತೇಶ್ ಕೂಡ ನಿನ್ನೆ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಒಟ್ನಲ್ಲಿ ಸಿಡಿಲಿನಿಂದ ಇಬ್ಬರು ಮಕ್ಕಳು ಬಾರದ ಲೋಕಕ್ಕೆ ತೆರಳಿದ್ದು, ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಓದಿ: ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ಬಡಿದ ಸಿಡಿಲು.. ಬಾಲಕನೊಬ್ಬನ ಸಾವು, ಕೋಮಾಗೆ ಜಾರಿದ ಮತ್ತೊಬ್ಬ!