ಬಂಟ್ವಾಳ(ದಕ್ಷಿಣ ಕನ್ನಡ): ಮುಂದಿನ 2024ರ ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದವರು ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಳ್ಳಲು ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವಿಗಾಗಿ ಯತ್ನಿಸುತ್ತಿದೆ. ಅಧಿಕಾರಕ್ಕೇನಾದರೂ ಬಂದರೆ ವರ್ಷಕ್ಕೆ ಹತ್ತು ಸಾವಿರ ಕೋಟಿ ಲೂಟಿ ಮಾಡಬಹುದು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಆರೋಪಿಸಿದ್ದಾರೆ.
ಜನವರಿ 14ರಂದು ಪೊಳಲಿಯಿಂದ ಆರಂಭಗೊಂಡ ಬಂಟ್ವಾಳ ಬಿಜೆಪಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪಾದಯಾತ್ರೆ ಗ್ರಾಮವಿಕಾಸ ಯಾತ್ರೆಯ ಸಮಾರೋಪ ಸಮಾರಂಭವನ್ನು ಬಂಟ್ವಾಳ ಬಸ್ತಿಪಡ್ಪುವಿನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅಣ್ಣಾಮಲೈ, ಕಾಂಗ್ರೆಸ್ ಬ್ರಿಟಿಷ್ ರಾಜ್ನ ಒಡೆದು ಆಳುವ ನೀತಿಯ ಮುಂದುವರಿದ ಭಾಗವಾಗಿದೆ. ಅದರೊಂದಿಗೆ ಅಗೋಚರವಾಗಿ ಕೊಮುಹಿಂಸೆ ಪ್ರಚೋದಕ ಅಜೆಂಡಾ ಬರುತ್ತದೆ ಎಂದು ಎಚ್ಚರಿಸಿದ ಅವರು, ಇಡೀ ಕರ್ನಾಟಕಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ. ರಾಜ್ಯದಲ್ಲಿ ಉತ್ತಮ 100 ಹಳ್ಳಿಗಳನ್ನು ಗುರುತಿಸಿದರೆ ಅದರಲ್ಲಿ ಶೇ.80 ರಷ್ಟು ಹಳ್ಳಿಗಳು ಕರಾವಳಿ ಕರ್ನಾಟಕಕ್ಕೆ ಸೇರಿರುತ್ತದೆ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂದರು.
![Annamalai and CT Ravi outrage CT Ravi outrage against congress party Annamalai and CT Ravi ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಹೊರಟಿದೆ ಕೈ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ 2024ರ ಲೋಕಸಭೆ ಚುನಾವಣೆ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವಿಗಾಗಿ ಯತ್ನ ಬಿಜೆಪಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ](https://etvbharatimages.akamaized.net/etvbharat/prod-images/kn-dk-01-annamalaivisit-av-vis-kac10008_28012023061448_2801f_1674866688_524.jpg)
ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಏನೇನು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಅಲ್ಲಿ ನೀಡಿದ ಘೋಷಣೆಗಳಲ್ಲಿ ಯಾವುದನ್ನೂ ಅನುಷ್ಠಾನ ಮಾಡಿಲ್ಲ. ನಾವು ಕಷ್ಟಪಟ್ಟು ದುಡಿದ ಹಣವನ್ನು ಪೋಲಾಗಲು ಬಿಡಬೇಡಿ ಎಂದು ಎಚ್ಚರಿಸಿದರು.
![Annamalai and CT Ravi outrage CT Ravi outrage against congress party Annamalai and CT Ravi ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಹೊರಟಿದೆ ಕೈ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ 2024ರ ಲೋಕಸಭೆ ಚುನಾವಣೆ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವಿಗಾಗಿ ಯತ್ನ ಬಿಜೆಪಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ](https://etvbharatimages.akamaized.net/etvbharat/prod-images/kn-dk-01-annamalaivisit-av-vis-kac10008_28012023061448_2801f_1674866688_234.jpg)
ಬಂಟ್ವಾಳದಲ್ಲೀಗ 2.0 ಯುಗ: ಬಂಟ್ವಾಳವಿಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಹಿಂದೆ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ಕ್ಷೇತ್ರ ಇದೀಗ ವಿಕಾಸಪಥದೆಡೆ ಸಾಗುತ್ತಿದೆ. ಬಂಟ್ವಾಳವನ್ನು 1.0 ಮತ್ತು 2.0 ಎಂಬ ಯುಗವನ್ನಾಗಿ ವಿಭಾಗಿಸಿ. ಈ ಹಿಂದೆ ಬಂಟ್ವಾಳದಲ್ಲಿ ನಿರಂತರ ಕೋಮುಹಿಂಸೆ, ಸೆಕ್ಷನ್ ಹಾಕುವ ಸನ್ನಿವೇಶವಿತ್ತು. ಶರತ್ ಮಡಿವಾಳ ಹತ್ಯೆ ಸಂದರ್ಭ ಬಂದೋಬಸ್ತ್ ಏರ್ಪಡಿಸಲು ನಾನೂ ಆಗ ಬಂದಿದ್ದೆ. ಆಗ ಜನಸಾಮಾನ್ಯರು ಇದರಿಂದ ತೊಂದರೆ ಅನುಭವಿಸಿದ್ದರು. ಆಗ ಅದು 1.0 ಯುಗವಾಗಿತ್ತು. ಈಗ ನಡೆಯುತ್ತಿರುವುದು 2.0 ಅಭಿವೃದ್ಧಿಯ ಯುಗ, ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆ ಮೂಲಕ ರಿಪೋರ್ಟ್ ಕಾರ್ಡ್ ನೀಡಿದ್ದಾರೆ ಎಂದರು.
ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ: ರಾಮ ಮಂದಿರ ವಿರೋಧಿಗಳು ನಕಲಿ ಹಿಂದುಗಳು.. ಕಾಂಗ್ರೆಸ್ ನಾಯಕರು ನಕಲಿ ಹಿಂದುತ್ವ ಆಚರಿಸುವವರು. ಮೋದಿ ಇಂಜೆಕ್ಷನ್ ಇಲ್ಲದಿದ್ದರೆ ಸಿದ್ದರಾಮಯ್ಯ ಅವರನ್ನು ಬಯ್ಯೋದಕ್ಕೂ ಆಗುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಮನಸ್ಸಿನಲ್ಲಿ ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮಾಡಿತ್ತು. ದೇವಸ್ಥಾನದ ಹುಂಡಿ ದೋಚುವ ಕೆಲಸ ಮಾಡುತ್ತಿದ್ದ ಕಾಂಗ್ರೆಸ್ ಸರ್ಕಾರ, ಶಾದಿ ಭಾಗ್ಯ ಮೂಲಕ ಒಂದೇ ಸಮುದಾಯದವರನ್ನು ತುಷ್ಟೀಕರಣ ನಡೆಸಿದರು. ಅನ್ನಭಾಗ್ಯವೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊಡುಗೆಯ ಪಾಲನ್ನು ನೀಡಿದ್ದಷ್ಡೇ ಎಂದರು.
ಕರೆಂಟಿಲ್ಲ ಎಂದು ಕೇಳಿದವರನ್ನು ಬಂಧಿಸಿದವರು 200 ಯೂನಿಟ್ ಕರೆಂಟ್ ಫ್ರೀ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಅವರನ್ನು ಟೀಕಿಸಿದರು. ಇತ್ತೀಚೆಗೆ ಪ್ರಜಾಧ್ವನಿ ಸಮಾವೇಶ ಬಿಜೆಪಿ ಬಯ್ಯುವ ಯಾತ್ರೆ ಆಗಿತ್ತು. ಮೋದಿ ಅವರನ್ನು ಬೈಯುವ ಕೆಲಸ ಮಾಡಿದ್ದರು ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದರು.
ಗುಜರಾತ್ನಲ್ಲಿ ನಡೆದ ಘಟನೆಗಳ ಕುರಿತು ತನಿಖೆ ನಡೆಸಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಾದ ಮೇಲೆ ಬಿಬಿಸಿ ಡಾಕ್ಯುಮೆಂಟರಿ ಮಾಡಿರುವುದು ಕಾಂಗ್ರೆಸ್ನ ಟೂಲ್ ಕಿಟ್ನ ಒಂದು ಭಾಗ. ಚೀನಾ, ಪಾಕಿಸ್ತಾನ, ಬಿಬಿಸಿ ಕುರಿತು ವಿಶ್ವಾಸವನ್ನಿಡುವ ಕಾಂಗ್ರೆಸ್ ಗೆ ದೇಶದೊಳಗೆ ನಮ್ಮ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೇಲೆ ವಿಶ್ವಾಸವಿಲ್ಲದೇ ಇರುವುದು ದುರದೃಷ್ಟಕರ ಎಂದರು.
ಪಿಎಫ್ಐನ ಸಂಚು: ಪ್ರವೀಣ್ ನೆಟ್ಟಾರು ಹತ್ಯೆ ಕೋಮುಶಕ್ತಿಗಳ ಅಜೆಂಡಾದ ಭಾಗವಾಗಿದ್ದು, ಪಿಎಫ್ಐ ದೇಶದಲ್ಲಿ ಅರಾಜಕತೆ ಉಂಟುಮಾಡಲು ಯತ್ನಿಸುತ್ತಿದೆ ಎಂದು ಹೇಳಿದರು.
ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ: ಕರ್ನಾಟಕದಲ್ಲಿ ಖಡಕ್ ಐಪಿಎಸ್ ಅಧಿಕಾರಿಯಾಗಿ ಹೆಸರು ಗಳಿಸಿ ದಕ್ಷ ಅಧಿಕಾರಿಯಾಗಿ ಅಣ್ಣಾಮಲೈ ಸೇವೆ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪರಾಭವಗೊಂಡರೂ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯನ್ನು ಬಿಜೆಪಿ ಅಣ್ಣಾಮಲೈ ಅವರಿಗೆ ಒಪ್ಪಿಸಿದ್ದು ಬಿಜೆಪಿಯ ನಿಷ್ಟಾವಂತರಾಗಿ ಕೆಲಸ ಮಾಡಿಸುತ್ತಿದ್ದಾರೆ. ಅವರು ಇಂದು ಜಿಲ್ಲೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅಣ್ಣಾಮಲೈ ಅವರನ್ನು ನೋಡಿ ಮುಗಿಬಿದ್ದ ಅಭಿಮಾನಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ದೇವಸ್ಥಾನದ ವತಿಯಿಂದ ಅಣ್ಣಾಮಲೈ ಅವರನ್ನು ಸ್ವಾಗತಿಸಲಾಯಿತು.
ಓದಿ: ತಡರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮನ.. ಸಿಎಂ, ಬಿಜೆಪಿ ನಾಯಕರಿಂದ ಸ್ವಾಗತ