ಮಂಗಳೂರು: ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಮೇಲೆ ದೇಶದ್ರೋಹದ ಕೇಸ್ ಹಾಕಿ, ಜೈಲಿಗೆ ಕಳುಹಿಸಬೇಕೆಂದು ಎಂದು ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಹೇಳಿಕೆ ನೀಡಿದ ಅನಂತಕುಮಾರ್ ಹೆಗಡೆಯನ್ನು ಬಿಜೆಪಿಯು ಪಕ್ಷದಿಂದ ಉಚ್ಚಾಟಿಸಬೇಕು. ಅವರ ಪಾರ್ಲಿಮೆಂಟ್ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯು ತನ್ನ ಸದಸ್ಯರನ್ನು ಇಂತಹ ಕೆಲಸಕ್ಕೆ ಛೂ ಬಿಡುತ್ತದೆ. ಅನಂತಕುಮಾರ್ ಹೆಗಡೆ ಈ ಮೊದಲೇ ಬುದ್ದಿಜೀವಿಗಳನ್ನು ಅವಹೇಳನ ಮಾಡಿದ್ದರು. ಅವರಿಗೆ ಮೊದಲೇ ಲಗಾಮು ಹಾಕಬೇಕಿತ್ತು. ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಇದ್ದರೆ ದೇಶ ಅಂದರೆ ಏನು? ಸಂವಿಧಾನ ಅಂದರೆ ಏನು ಎಂದು ಗೊತ್ತಾಗುತ್ತಿತ್ತು. ಈಗ ನೋಟಿಸ್ ಕೊಟ್ಟು ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು ಇದಕ್ಕಿಂತ ದೊಡ್ಡ ದೇಶದ್ರೋಹ ಬೇರೆ ಇಲ್ಲ ಎಂದರು.