ಉಳ್ಳಾಲ(ದಕ್ಷಿಣ ಕನ್ನಡ): ಮದುವೆ ನಡೆಯುತ್ತಿದ್ದ ವೇಳೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ ವರನನ್ನು ಬಂಧಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ. ಉಳ್ಳಾಲ ಪೊಲೀಸರೊಂದಿಗೆ ಬಂದು ಕಲ್ಯಾಣ ಮಂಟಪದ ಬಳಿ ಯುವತಿ ಈ ಒತ್ತಾಯ ಮಾಡಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಬೀರಿ ಬಳಿ ಇಂಥದ್ದೊಂದು ಪ್ರಸಂಗ ನಡೆಯಿತು.
ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಹಾಗೂ ಮೈಸೂರಿನ ಮೂಲದ ಸಂತ್ರಸ್ತ ಹುಡುಗಿ ಒಂದೂವರೆ ವರ್ಷದ ಹಿಂದೆ ಶಾದಿ ಡಾಟ್ ಕಾಂ ಮೂಲಕ ಪರಿಚಯವಾಗಿತ್ತು. ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಅತ್ಯಾಚಾರ ಮಾಡಿದ್ದನೆಂದು ಮೈಸೂರಿನ ಯುವತಿ ಕೇರಳದ ಕೊಯಿಕ್ಕೋಡ್ ಪೊಲೀಸ್ ಠಾಣೆಯಲ್ಲಿ ಡಿ.26 ರಂದು ದೂರು ದಾಖಲು ಮಾಡಿದ್ದರು. ಈ ನಡುವೆ ಮಂಗಳೂರಿನ ಯುವತಿ ಜೊತೆಗೆ ಅಕ್ಷಯ್ಗೆ ವಿವಾಹ ನಿಶ್ಚಯವಾಗಿತ್ತು. ಕರ್ನಾಟಕದ- ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿರುವ ವಿಷಯ ತಿಳಿದ ಯುವತಿ, ಹಾಲ್ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಮದುವೆ ನಂತರ ವರ ಪರಾರಿ: ಆರೋಪಿ ಕೊಯಿಕ್ಕೋಡ್ ನಿವಾಸಿಯಾಗಿದ್ದು, ಆತ ಮಂಗಳೂರು ಮೂಲದ ಯುವತಿಯನ್ನು ಉಳ್ಳಾಲದ ಕೋಟೆಕಾರ್ ಬೀರಿಯ ಸಭಾಂಗಣದಲ್ಲಿ ಮದುವೆ ಆಗಿದ್ದಾನೆ. ಬಳಿಕ ವರ ಪರಾರಿಯಾಗಿದ್ದಾನೆ. ಆತನ ವಿರುದ್ಧ ಆರೋಪ ಮಾಡಿರುವ ಯುವತಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಕೇರಳದ ಪೊಲೀಸರನ್ನು ಸಂಪರ್ಕಿಸಿದಾಗ ಆತನ ಮದುವೆ ಆರತಕ್ಷತೆ ಮುಗಿದ ಬಳಿಕ ಬಂಧಿಸುವುದಾಗಿ ತಿಳಿಸಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಆರೋಪಿ ಅಕ್ಷಯ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ವರನನ್ನು ತಕ್ಷಣ ಬಂದಿಸಬೇಕು ನನಗೆ ನ್ಯಾಯ ದೊರಕಿಸಬೇಕು ಎಂದು ಸಂತ್ರಸ್ತ ಯುವತಿ ಒತ್ತಾಯಿಸಿದರು. ಈ ವೇಳೆ, ಕೆಲ ಕಾಲ ಪೊಲೀಸರು ಮತ್ತು ವರನ ಕುಟುಂಬದವರ ನಡುವೆ ವಾಕ್ಸಮರ ನಡೆಯಿತು. ನೂತನವಾಗಿ ನಿರ್ಮಾಣಗೊಂಡಿದ್ದ ಖಾಸಗಿ ಹಾಲ್ನ ಮೊದಲನೇ ಮದುವೆಗೆ ವಿಘ್ನ ಉಂಟಾಗಿತ್ತು.
ಇದನ್ನೂ ಓದಿ: ಪತ್ನಿ ಮೇಲೆ ಅನುಮಾನ, ಮಚ್ಚಿನಿಂದ ಹಲ್ಲೆ ನಡೆಸಿದ ಪತಿ ಬಂಧನ