ಮಂಗಳೂರು: ಕೊರೊನಾ ವೈರಸ್ ಹಾವಳಿ ಬಳಿಕ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಇದೀಗ ಮಾರುಕಟ್ಟೆಯಲ್ಲಿ ಭಿನ್ನ ಭಿನ್ನ ಮಾಸ್ಕ್‌ಗಳು ದೊರೆಯುತ್ತಿವೆ. ಸರ್ಜಿಕಲ್ ಮಾಸ್ಕ್‌ನಿಂದ ಹಿಡಿದು ಕಾಟನ್ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ವರೆಗೆ ಮಾರುಕಟ್ಟೆಯಲ್ಲಿವೆ. ಆದರೆ ಮಂಗಳೂರಿನ ಓರ್ವ ಪರಿಸರ ಪ್ರೇಮಿ, ಪರಿಸರಸ್ನೇಹಿ ಮಾಸ್ಕ್ ತಯಾರಿಸಿ ಗಮನಸೆಳೆದಿದ್ದಾರೆ.
ಮಂಗಳೂರಿನ ಪೇಪರ್ ಸೀಡ್ಸ್ ಸಂಸ್ಥೆಯು ಪರಿಸರ ಪೂರಕವಾದ ನಾನಾ ಬಗೆಯ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಇದೀಗ ಸಂಸ್ಥೆಯಿಂದ ಪರಿಸರ ಸ್ನೇಹಿ ಮಾಸ್ಕ್ ತಯಾರಿಸಲಾಗಿದೆ. ಈ ಮಾಸ್ಕ್ ಸುರಕ್ಷತೆ ಮತ್ತು ಪರಿಸರ ಪೂರಕವೆಂಬುದು ವಿಶೇಷ.
ಪೇಪರ್ ಸೀಡ್ಸ್ ಸಂಸ್ಥೆಯ ನಿತಿನ್ ವಾಸ್ ಅವರು ಈ ಪರಿಸರ ಪೂರಕ ಮಾಸ್ಕ್ ತಯಾರಿಸಿದ್ದಾರೆ. ಈ ಮಾಸ್ಕ್ ಎರಡು ಲೇಯರ್ ಹೊಂದಿದೆ. ಒಳಭಾಗದಲ್ಲಿ ಕಾಟನ್ ಬಟ್ಟೆ ಇದ್ದರೆ, ಹೊರಭಾಗದಲ್ಲಿ ಪೇಪರ್ ಪಲ್ಪ್ ಮಾಡಿ ಅದರಲ್ಲಿ ಗಿಡಗಳ ಬೀಜಗಳನ್ನು ಹಾಕಲಾಗಿದೆ. ಇದರಲ್ಲಿ ಟೊಮ್ಯಾಟೊ, ತುಳಸಿ ಮೊದಲಾದ ಗಿಡಗಳ ಬೀಜಗಳನ್ನು ಹಾಕಲಾಗಿದ್ದು ಈ ಮಾಸ್ಕ್ ಬಳಸಿದ ಬಳಿಕ ಮಣ್ಣಿಗೆ ಹಾಕಿದರೆ ಗಿಡವಾಗಿ ಬೆಳೆಯುತ್ತದೆ.
ಮಾರುಕಟ್ಟೆಯಲ್ಲಿ ಬರುವ ಸರ್ಜಿಕಲ್ ಮಾಸ್ಕ್‌ಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಈ ಮಾಸ್ಕ್ ಪರಿಸರ ಸ್ನೇಹಿ ಎಂಬುದು ವಿಶೇಷ. ಇದನ್ನು ನೀರಿನಲ್ಲಿ ತೊಳೆಯಲು ಅಸಾಧ್ಯವಾಗಿರುವುದರಿಂದ ಒಂದು ತಿಂಗಳವರೆಗೆ ಮಾತ್ರ ಉಪಯೋಗಿಸಬಹುದು ಎನ್ನುತ್ತಾರೆ ನಿತಿನ್ ವಾಸ್.
ಇದನ್ನೂ ಓದಿ: ತವರಿನಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರು