ಬೆಳ್ತಂಗಡಿ (ದ.ಕ): ತಣ್ಣೀರುಪಂತದ ದೇಸಿನ್ ಕೊಡಿ ರವಿಶಂಕರ್ ಕೋಟ್ಯಾನ್ ಅವರ ಪುತ್ರಿ ಆರಾಧ್ಯಳ ಚಿಕಿತ್ಸೆಗೆ ‘ಅಮೃತ ಸಂಜೀವಿನಿ’ ಸಂಸ್ಥೆಯಿಂದ 17 ಲಕ್ಷ ರೂ. ಸಂಗ್ರಹಿಸಿ ಉಜಿರೆ ಶಾರದಾ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.
ಬಳಿಕ ಮಾತನಾಡಿದ್ದ ಗುರುಪುರ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ‘ಅಮೃತ’ ಎಂಬ ಪದ ಪುನರ್ಜನ್ಮಕ್ಕೆ ಸಿಕ್ಕಿರುವಂತಹ ವರದಾನ. ತನ್ನೊಂದಿಗೆ ಸಮಾಜದ ಅದೆಷ್ಟೋ ದುರ್ಬಲ ವರ್ಗವನ್ನು ಕಟ್ಟುವ ಕೆಲಸದಲ್ಲಿ ಮುಂದಾಗಿರುವುದು ಧರ್ಮದ ಸ್ಥಾಪನೆಯಾಗಿದೆ ಎಂದರು.
ಸಮಾಜದಲ್ಲಿ ತಾವು ಮತ್ತೊಬ್ಬರ ಜೀವನಕ್ಕೆ ನೆರವಾಗುವುದೇ ಪುಣ್ಯದ ಕೆಲಸ. ಯುವಕರು ಒಗ್ಗೂಡಿ ಅಮೃತ ಸಂಜೀವಿನಿ ಎಂಬ ಸಂಘಟನೆ ಹುಟ್ಟುಹಾಕಿ ಮಹತ್ ಕಾರ್ಯದಲ್ಲಿ ತೊಡಗಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದರು.
ತಣ್ಣೀರುಪಂತದ ದೇಸಿನ್ ಕೊಡಿ ರವಿಶಂಕರ್ ಕೋಟ್ಯಾನ್ ಅವರ 3 ವರ್ಷ 7 ತಿಂಗಳಿನ ಮಗಳು ಆರಾಧ್ಯ ಶ್ರವಣದೋಷ ಎದುರಿಸುತ್ತಿದ್ದಳು. ಚಿಕಿತ್ಸೆಗಾಗಿ ಸುಮಾರು 14 ಲಕ್ಷ ರೂ. ವೆಚ್ಚವಾಗುವುದಾಗಿ ವೈದ್ಯರು ತಿಳಿಸಿದ್ದರು. ಇದನ್ನು ಗಮನಿಸಿ ಅಮೃತ ಸಂಜೀವಿನಿ ತಂಡವು 60ನೇ ಕಾರ್ಯಯೋಜನೆಯಾಗಿ ಆರಾಧ್ಯಳ ಚಿಕಿತ್ಸೆಗೆ 17 ಲಕ್ಷ ರೂ. ಸಂಗ್ರಹಿಸಿ ಮಾನವೀಯತೆ ಮೆರೆದಿದೆ.
ನ.5ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಶಾಸಕ ಹರೀಶ್ ಪೂಂಜ ಮನವಿಯಂತೆ ಮಗುವಿನ ಸಮಸ್ಯೆ ಆಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ವೈದ್ಯಕೀಯ ಸೇವೆಗೆ 5 ಲಕ್ಷ ರೂ. ಪರಿಹಾರ ನೀಡಲು ಸ್ಥಳದಲ್ಲೇ ಆದೇಶ ನೀಡಿದ್ದರು.
ಅಮೃತ ಸಂಜೀವಿನಿ ಸದಸ್ಯ ವಸಂತ ಪಣಪಿಲ, ರಾಜೇಶ್ ಶೆಟ್ಟಿ, ರವಿಶಂಕರ್ ಕೋಟ್ಯಾನ್,ಪ್ರಶಾಂತ್ ರಾಮಗಿರಿ, ಹಾಗೂ ಪೂರ್ಣಿಮಾ ಉಪಸ್ಥಿತರಿದ್ದರು.