ಸುರತ್ಕಲ್ : ಲಯನ್ಸ್ ಕ್ಲಬ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಸೇವೆ ಹಸ್ತಾಂತರಿಸಲಾಯಿತು. ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ಪ್ರತಿಯೊಬ್ಬರಲ್ಲೂ ಮಾನವೀಯತೆಯ ಗುಣ ಇರಬೇಕು. ಆದರೆ, ಈ ಕೊರೊನಾ ಸೋಂಕು ಹಲವೆಡೆ ಮಾನವೀಯತೆಯನ್ನು ಮರೆಯುವಂತೆ ಮಾಡಿದೆ. ಹಲವಾರು ಕಡೆ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಸೋಂಕಿತನನ್ನು ಶೀಘ್ರ ಗುಣಪಡಿಸಲು ಆತನಿಗೆ ಮಾನಸಿಕ ಸ್ಥೈರ್ಯ ತುಂಬಬೇಕೇ ಹೊರತು ತಿರಸ್ಕಾರ ಅಲ್ಲ ಎಂದರು.
ಯಾವುದೇ ಕಾರಣಕ್ಕೂ ಅಜಾಗರೂಕತೆ ವಹಿಸಬೇಡಿ, ಒಂದು ಸ್ಥಳದಲ್ಲಿ ಹೆಚ್ಚು ಹೊತ್ತು ನಿಲ್ಲದೇ ತೆರಳಬೇಕು. ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ನಾವು ನಿತ್ಯ ಜೀವನದಲ್ಲಿ ಮುಂದುವರಿಯಬೇಕು. ಲಾಕ್ಡೌನ್ ನಿಂದ ಒಂದಿಷ್ಟು ಸೋಂಕು ಕಡಿಮೆಯಾಗಬಹುದು. ಆದರೆ, ಪರಿಹಾರ ಅದಲ್ಲ ಎಂದರು.
ಲಯನ್ಸ್ ಸುರತ್ಕಲ್ ಅಧ್ಯಕ್ಷೆ ಗುಣವತಿ ರಮೇಶ್ ಮಾತನಾಡಿ, ಸುರತ್ಕಲ್ ಲಯನ್ಸ್ ಕ್ಲಬ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ನೀಡಿದೆ. ಇದಕ್ಕೆ ಲಯನ್ಸ್ನ ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ. ಸೇವೆಯನ್ನು ಯಾವುದೇ ನಿರೀಕ್ಷೆ ಇಲ್ಲದೇ ಲಯನ್ಸ್ ಜನರಿಗಾಗಿ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭ ಉಪಮೇಯರ್ ವೇದಾವತಿ, ಲಯನ್ಸ್ನ ವಿಶ್ವನಾಥ್ ಶೆಟ್ಟಿ, ಡಾ.ಟಿ.ಆರ್ ಶೆಟ್ಟಿ, ಮೊಯಿದೀನ್ ಕುಂಞಿ, ರೀಜಿನಲ್ ಚೇರ್ಪರ್ಸನ್ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಯತಿರಾಜ್ ಸಾಲಿಯಾನ್, ಕೋಶಾಧಿಕಾರಿ ಚಂದ್ರಮೋಹನ್, ಜೀವನ್ ಬೆಳ್ಳಿಯಪ್ಪ, ವಿಲಿಯಂ ಮಸ್ಕರೇನಸ್, ರಮೇಶ್ ಕುಮಾರ್, ರಾಸಯ್ಯ, ಮೈಮುನ ಮೊಯಿದೀನ್, ಕಿರಣ್, ಜಯಂತ್ , ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಉದಯ್ ಶಂಕರ್, ಮನಪಾ ಸದಸ್ಯ ವರುಣ್ ಚೌಟ, ಪಾಲಿಕೆಯ ಆರೋಗ್ಯ ವಿಭಾಗದ ಸುಶಾಂತ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಮನಪಾ ಸದಸ್ಯರು, ಲಯನ್ಸ್ ಪದಾಧಿಕಾರಿಗಳು ಇದ್ದರು.