ಬೆಳ್ತಂಗಡಿ: ಅಗ್ನಿ ಆಕಸ್ಮಿಕದಿಂದ ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಕಾಪಾಡಲು ಪಣತೊಟ್ಟ ಮೂಡಿಗೆರೆ ಮೂಲದ ಆ್ಯಂಬುಲೆನ್ಸ್ ಚಾಲಕರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ದ.ಕ. ಜಿಲ್ಲೆಯ ಈ ಆ್ಯಂಬುಲೆನ್ಸ್ ಚಾಲಕರ ಸಮಯೋಚಿತ ಸಹಾಯದಿಂದ ಗಾಯಾಳುವನ್ನು ಯಶಸ್ವಿಯಾಗಿ ಆಸ್ಪತ್ರೆಗೆ ಸೇರಿಸಿದ ಘಟನೆಗೆ ಸಾರ್ವಜನಿಕರಿಂದ ಭಾರೀ ಜನಮೆಚ್ಚುಗೆ ವ್ಯಕ್ತವಾಗಿದೆ. ಉಜಿರೆಯಿಂದ ಬಿ.ಸಿರೋಡ್‌ವರೆಗೆ ಬೆಳಗ್ಗೆ ವಾಹನ ದಟ್ಟಣೆಯಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಸ್ವಪ್ರೇರಣೆಯಿಂದ ಸ್ವಯಂ ಸೇವಕರಾಗಿ ಕರ್ತವ್ಯ ನಿವ್ಯಹಿಸಿ, ಆ್ಯಂಬುಲೆನ್ಸ್ ತ್ವರಿತವಾಗಿ ಸಾಗಲು ಸಹಾಯ ಮಾಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿ ಬೀಡು ಹೋಬಳಿಯ ಬಾಲಕಿಯೊಬ್ಬರಿಗೆ ಅಗ್ನಿ ಆಕಸ್ಮಿಕದಿಂದ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಆ್ಯಂಬುಲೆನ್ಸ್ ಚಾಲಕ ಮೂಡಿಗೆರೆಯ ಮಂಜುನಾಥ್ ಚೇತನ್ ಅವರು ಕೇವಲ 1ಗಂಟೆ 45 ನಿಮಿಷದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಚ್ಚರಿ ಅಂದ್ರೆ ಆ್ಯಂಬುಲೆನ್ಸ್ನ ಸೈರನ್ ಇದೇ ಸಮಯಕ್ಕೆ ಕೆಟ್ಟು ಹೋದರೂ ಕೂಡ ಚಾಲಕ ಬಹಳ ಚಾಕಚಕ್ಯತೆಯಿಂದ ವಾಹನ ಓಡಿಸಿ ಪ್ರಾಣ ಉಳಿಸಿದ್ದಾರೆ.
ದಾರಿ ಮಾಡಿಕೊಟ್ಟ 800 : ಸೈರನ್ ಕೆಟ್ಟ ನಂತರ ಕೂಡಲೇ ಸಾರ್ವಜನಿಕರೊಬ್ಬರು ತಮ್ಮ ಮಾರುತಿ 800 ಕಾರಿನ ಮೂಲಕ ಉಜಿರೆಯವರೆಗೆ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸಹಕರಿಸಿದರು.