ಮಂಗಳೂರು: ಕೊರೊನಾ ಸೋಂಕು ತಂದ ಸಂಕಷ್ಟದಿಂದ ಯಾರೂ ಮನೆಯಿಂದ ಹೊರ ಬರುವಂತಿಲ್ಲ ಸರಕಾರ ಆದೇಶ ಮಾಡಿದೆ. ಯಾವುದೇ ಸಭೆ ಸಮಾರಂಭವೂ ನಡೆಸುವಂತಿಲ್ಲ. ಆದರೆ, ಮಂಗಳೂರಿನ ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗ ಮಾತ್ರ ಇಂದು ವಿಶಿಷ್ಟ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ನಡೆಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು.
ಜೂಮ್ ಎಂಬ ಅಪ್ಲಿಕೇಶನ್ ಬಳಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಮತ್ತು ಎಂಬಿಎ ವಿಭಾಗವು ಅಂಬೇಡ್ಕರ್ ಜಯಂತಿಯನ್ನು ವಿನೂತವಾಗಿ ಆಚರಿಸಿತು.
ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಈ ಮಾದರಿಯ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯರ ನಿರ್ದೇಶನದಂತೆ ಪ್ರಸ್ತುತವಾಗಿ ಜೂಮ್ ಅಪ್ಲಿಕೇಶನ್ ಮುಖಾಂತರ ಆನ್ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿದೆ. ಅದೇ ಮಾದರಿಯಲ್ಲಿ ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಎಂಬಿಎ (ಐಬಿ)ಮುಖ್ಯಸ್ಥ ಡಾ. ಯತೀಶ್ ಕುಮಾರ್ ಈ ಆನ್ಲೈನ್ ಕಾರ್ಯಕ್ರಮವನ್ನು ವಿನೂತನವಾಗಿ ಆಯೋಜನೆ ಮಾಡಿದ್ದಾರೆ.