ಮಂಗಳೂರು: ಕೆಲ ಮುಂದುವರಿದ ಸಮಾಜಗಳು ಮುಂದುವರೆದು ರಾಜಕೀಯವಾಗಿ, ಶೈಕ್ಷಣಿಕವಾಗಿ ಬುದ್ಧಿವಂತರಿರಬಹುದು. ಆದರೆ ನಾವು ದಡ್ಡರಾಗಬಾರದು, ಸಮಸ್ತ ದುರ್ಬಲ ವರ್ಗದ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಹೊಂದಿರುವ ಅನೇಕ ರಾಷ್ಟ್ರಗಳಿವೆ. ಆದರೆ ಅಲ್ಲಿ ಒಂದೇ ಜಾತಿ, ಒಂದೇ ಭಾಷೆ ಇದೆ. ಆದರೆ ಭಾರತ ಅನೇಕ ಜಾತಿ, ಭಾಷೆ, ಮತ, ವೈವಿಧ್ಯತೆಗಳನ್ನು ಒಳಗೊಂಡ ರಾಷ್ಟ್ರ. ಆದ್ದರಿಂದ ದೇಶದ ಸಂವಿಧಾನವನ್ನು ರಚಿಸುವುದು ಅಷ್ಟೇ ಕಠಿಣ ಕಾರ್ಯ. ಆದರೂ ಭಾರತದ ಎಲ್ಲಾ ಜನ ಒಪ್ಪುವ ರೀತಿ ಸಂವಿಧಾನ ರಚನೆ ಮಾಡಲಾಗಿದೆ.
ಶತಮಾನಗಳಾಚೆ ಭಾರತದ ಜಾತಿ ವ್ಯವಸ್ಥೆ ಕಟ್ಟುಪಾಡುಗಳು ಹೇಗಿತ್ತು ಎಂಬುದನ್ನು ಚರಿತ್ರೆ ತಿಳಿಸುತ್ತದೆ. ಆದ್ದರಿಂದ ದಮನಿತರು, ದುರ್ಬಲ ವರ್ಗದವರು ಚರಿತ್ರೆಯನ್ನು ಮರೆಯಬಾರದು. ಹಿಂದೆ ಬಲಿಷ್ಠ ವರ್ಗದವರ ಕಪಿಮುಷ್ಠಿಯಲ್ಲಿ ಸಮಾಜ ಇತ್ತು. ಶೋಷಿತರ ಪರಿಸ್ಥಿತಿ ದುಸ್ತರವಾಗಿತ್ತು. ಅಂತಹ ಶೋಷಿತ ಸಮುದಾಯದಲ್ಲಿ ಹುಟ್ಟಿದ ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.