ಉಳ್ಳಾಲ : ಬಹುಗ್ರಾಮ ಕುಡಿಯುವ ನೀರು ಐತಿಹಾಸಿಕ ಯೋಜನೆಗೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಚಾಲನೆ ನೀಡಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದೆ. ಎಲ್ಲ ಗ್ರಾಮಗಳಿಗೂ ಸಮಯ, ಸಂದರ್ಭೋಚಿತವಾಗಿ ನೀರು ಸರಬರಾಜು ಮಾಡಲಿದ್ದೇವೆ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ನೇತ್ರಾವತಿ ನದಿ ತಟದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಜಾಕ್ ವೆಲ್ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 182ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಸಹಕರಿಸಿದ ಇಲ್ಲಿನ ಸುಬ್ರಹ್ಮಣ್ಯ ಭಟ್ ಮತ್ತು ಕುಟುಂಬಸ್ಥರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗಲಿ ಎಂಬ ಭಾವನೆಯಿಂದ ನೇರವಾಗಿ ಒಪ್ಪಿಗೆ ಕೊಟ್ಟಿದ್ದರಿಂದ ಟೆಂಡರ್ ವೇಗ ಪಡೆಯುವಂತಾಯಿತು ಎಂದರು.
ಇದೇ ವೇಳೆ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೊಇನು ಮುಂತಾದವರು ಉಪಸ್ಥಿತರಿದ್ದರು.