ಬಂಟ್ವಾಳ(ದಕ್ಷಿಣ ಕನ್ನಡ): 'ಕಾಂತಾರ ಸಿನಿಮಾ'ದ ಮೂಲಕ ತುಳುನಾಡಿನ ದೈವಗಳ ಮಹತ್ವ ಜಗತ್ತಿನೆಲ್ಲೆಡೆ ಪಸರಿಸುತ್ತಿರುವ ಬೆನ್ನಲ್ಲೇ ಉಕ್ರೇನ್ ಕುಟುಂಬವೊಂದು ಶುಕ್ರವಾರ ರಾತ್ರಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ನೀಡಿ ಗಮನ ಸೆಳೆದಿದೆ. ಆದರೆ ಇವರಿಗೆ ಕಾಂತಾರ ಸಿನಿಮಾ ಪ್ರೇರಣೆ ಅಲ್ಲ. ಬದಲಾಗಿ ಮಗುವಿನ ಅನಾರೋಗ್ಯದ ಹಿನ್ನೆಲೆ ಕೊರಗಜ್ಜನ ಕೋಲದಲ್ಲಿ ಹೇಳಿದ್ದ ಹರಕೆಯನ್ನು ತೀರಿಸಿರುವ ಕುಟುಂಬ ಇದೀಗ ಸಂತೃಪ್ತ ಮನೋಭಾವದೊಂದಿಗೆ ಉಕ್ರೇನ್ಗೆ ಹೊರಟಿದೆ.
ಕಳೆದ ಕೆಲ ತಿಂಗಳ ಹಿಂದೆ ಉಕ್ರೇನ್ನಿಂದ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಪ್ರಜೆಗಳಾದ ಆ್ಯಂಡ್ರೋ, ಅವರ ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಈ ಕುಟುಂಬ ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿಯವರನ್ನು ಭೇಟಿ ಮಾಡಿದ್ದರು.
ಈ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್ ದಂಪತಿ ಗುರೂಜಿಯವರಲ್ಲಿ ತಿಳಿಸಿದ್ದರು. ಅದರಂತೆ ದೇಶಿ ದನದ ಗೋಮೂತ್ರದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.
ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದರಲ್ಲದೆ, ಅಗೇಲು ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆ ಅಜ್ಜನ ಪವಾಡಕ್ಕೆ ಋಣಿಯಾಗಿ ಈ ಕುಟುಂಬ ಶುಕ್ರವಾರ ರಾತ್ರಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ.
ಭಕ್ತಿಭೂಷಣ್ ದಾಸ್ ಪ್ರಭೂಜಿ, ಪದ್ಮನಾಭ ಗೋವಿನ ತೋಟ, ರಾಮಚಂದ್ರ ಮಾರಿಪಳ್ಳ, ಯಾದವ ಕೊಡಂಗೆ, ನವೀನ್ ಮಾರ್ಲ ಮೊದಲಾದವರ ಉಪಸ್ಥಿತಿಯಲ್ಲಿ ಅಗೇಲು ಸೇವೆ ನಡೆದಿದ್ದು, ಉಕ್ರೇನ್ ಕುಟುಂಬ ಸಂತೃಪ್ತ ಮನೋಭಾವದಿಂದ ಭಾಗವಹಿಸಿತ್ತು.
ಇದನ್ನೂ ಓದಿ: ಕೊರಗಜ್ಜನ ಪವಾಡದಿಂದ ಬದುಕುಳಿದ ಕಂದಮ್ಮ.. ಅಜ್ಜನಿಗೆ ಚಿರಋಣಿ ಎಂದ ಪೋಷಕರು