ಪುತ್ತೂರು: ನಗರದ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ ಘಟನೆ ಮಾಸುವ ಮುನ್ನವೇ ಕಿಲ್ಲೆ ಮೈದಾನದ ಬಳಿ ಸೈನಿಕರ ಸ್ಮರಣಾರ್ಥ ಸ್ಥಾಪಿಸಲಾಗಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿಗೂ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.
ಹುತಾತ್ಮ ಯೋಧರನ್ನು ಸ್ಮರಿಸುವ ಸಲುವಾಗಿ ಸ್ಥಾಪಿಸಲಾಗಿರುವ, ದಿನದ 24 ಗಂಟೆಗಳ ಕಾಲವೂ ಉರಿಯುವ ದೀಪಕ್ಕೆ ಹಾನಿ ಮಾಡುವ ಉದ್ದೇಶದಿಂದ ಸುತ್ತಲಿನ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯ ನಾಲ್ಕು ವರ್ಷಗಳ ಹಿಂದೆ ಈ ಜ್ಯೋತಿಯನ್ನು ಸ್ಥಾಪಿಸಿತ್ತು.
ಪ್ರಸ್ತುತ ಅದರ ನಿರ್ವಹಣೆಯ ಹೊಣೆಯನ್ನು ಇದೇ ಟ್ರಸ್ಟ್ ಮಾಡುತ್ತಿದೆ. ಇಂದು ಬೆಳಗ್ಗೆ ಅಂಬಿಕಾ ವಿದ್ಯಾಸಂಸ್ಥೆಯ ಮ್ಯಾನೇಜರ್ ರವೀಂದ್ರ ಅವರು ಸ್ಮಾರಕವನ್ನು ಸ್ವಚ್ಚ ಮಾಡಲು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೃತ್ಯದ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಮನೆಗಳ್ಳತನ : ಮಲಗಿದ್ದ ಗೃಹಿಣಿಯ ಕಾಲಿಂದಲೇ ಚೈನ್ ಕದ್ದೊಯ್ದ ಖದೀಮರು!
ವಾರದ ಹಿಂದೆಯಷ್ಟೇ ಪುತ್ತೂರಿನ ಹೃದಯ ಭಾಗವಾದ ಬಸ್ ನಿಲ್ದಾಣದ ಬಳಿಯ ಗಾಂಧಿ ಪ್ರತಿಮೆಗೆ ಹಾನಿ ಮಾಡಲಾಗಿತ್ತು. ಬಳಿಕ ಅದೊಂದು ಮಾನಸಿಕ ಅಸ್ವಸ್ಥನ ಕೃತ್ಯ ಎಂದು ಪೊಲೀಸರು ಪ್ರಕರಣಕ್ಕೆ ತೆರೆ ಎಳೆದಿದ್ದರು.