ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ನಡೆಯುವ ಮುನ್ಸೂಚನೆ ಸಿಕ್ಕಿದ್ದು, ನ್ಯಾಯಾಲಯ ನವೆಂಬರ್ 15 ರೊಳಗೆ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬರಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಚುನಾವಣಾ ಕಾವು ಆರಂಭವಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದಿದ್ದ ಜನಪ್ರತಿನಿಧಿಗಳ ಆಡಳಿತ ಮುಗಿದು 5 ತಿಂಗಳು ಕಳೆದಿದೆ. ಜನಪ್ರತಿನಿಧಿಗಳ ಅಧಿಕಾರವಿಲ್ಲದೆ ಜನರು ತೊಂದರೆಗೆ ಸಿಲುಕಿದ್ದರು. ಈ ಬಗ್ಗೆ ಮಂಗಳೂರಿನ ಅಬ್ದುಲ್ ಫಾರೂಕ್ ಮತ್ತಿತರು ಹೈಕೋರ್ಟ್‌ಗೆ ಪಿಐಎಲ್ ಹಾಕಿ ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಅರ್ಜಿ ಸ್ವೀಕರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ನ. 15 ರೊಳಗೆ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ತರಲು ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಈ ಹಿಂದೆ ನಿಗದಿಪಡಿಸಲಾಗಿದ್ದ ಮೀಸಲಾತಿಯ ಮೇಲೆ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಪಾಲಿಕೆ ಆಡಳಿತಾವಧಿ ಮುಗಿದಿದ್ದರೂ ಚುನಾವಣೆ ನಡೆದಿರಲಿಲ್ಲ. ಇತ್ತೀಚೆಗೆ ಮೀಸಲಾತಿ ವಿಚಾರದಲ್ಲಿ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದರ ಮರುಪರಿಶೀಲನಾ ಅರ್ಜಿ ಮಾತ್ರ ಇತ್ಯರ್ಥವಾಗಲು ಬಾಕಿ ಇದೆ. ಈ ಮಧ್ಯೆ ಪಾಲಿಕೆಗೆ ಎಲೆಕ್ಷನ್ ನಡೆಸುವಂತೆ ಕೋರ್ಟ್ ಸೂಚಿಸಿದೆ.
ಕಳೆದ ಚುನಾವಣೆಯಲ್ಲಿ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ 35 ಸದಸ್ಯ ಬಲವಿದ್ದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಪಡೆದಿತ್ತು.