ಮಂಗಳೂರು: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಲಿಷ್ಠ ವರ್ಗದವರಿಗೆ ಮನೋಧೈರ್ಯ ಜಾಸ್ತಿಯಾಗಿದ್ದು, ಇದು ಅಪಾಯದ ಸಂಕೇತವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿರುವುದು ಬಹಳ ದುಃಖಕರ ವಿಚಾರ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಲಿಷ್ಠ ವರ್ಗದವರಿಗೆ ಧೈರ್ಯ ಬಂದಿದೆ. ಉತ್ತರ ಭಾರತದ ಕೆಲವು ಜಿಲ್ಲೆಗಳಲ್ಲಿ ಈ ಬಲಿಷ್ಠ ವರ್ಗವನ್ನು ಎದುರಿಸಲು ದಲಿತರು, ಅಲ್ಪಸಂಖ್ಯಾತರು, ಬ್ರಾಹ್ಮಣರ ಗುಂಪು ಒಂದಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಲಿಷ್ಠ ವರ್ಗದ ಮನೋಧೈರ್ಯ ಜಾಸ್ತಿಯಾಗಿರುವುದು ಅಪಾಯದ ಸಂಕೇತ ಎಂದರು.
ದೇಶದಲ್ಲಿ ಸಂಘ ಪರಿವಾರದ ಅಧಿಕಾರವಧಿಯಲ್ಲಿ ಪ್ರಭಾವಿ ಸಮುದಾಯ ಮೆಚ್ಚಿಸಲಾಗುತ್ತದೆ. ಸುಶಾಂತ್ ಸಿಂಗ್ ರಜಪೂತ್ ಕೊಡುವ ಮಹತ್ವ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಕೊಡಲಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯಬಾರದು. ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್ ಅವರು, ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯ ಮನೆಗೆ ಹೋಗಿ ಸಾಂತ್ವನ ಹೇಳಲು ಹೋದ ರಾಹುಲ್ ಗಾಂಧಿಯ ಕಾಲರನ್ನು ಪೊಲೀಸರು ಹಿಡಿದಿದ್ದಾರೆ. ಅಲ್ಲಿ ಪೊಲೀಸರು ಆರೋಪಿಯ ಪರವಾಗಿದ್ದಾರೆ. ಅತ್ಯಾಚಾರಿಗಳ ಪರವಾಗಿ ನಿಲ್ಲಲು ರಾಹುಲ್ ಗಾಂಧಿ ಕಾಲರ್ ಹಿಡಿದಿದ್ದಾರೆ ಎಂದರು. ಪ್ರತಿಪಕ್ಷ ಮುಖಂಡರಿಗೆ ಪೊಲೀಸರ ಮೂಲಕ ಹಲ್ಲೆ ಮಾಡುವ ಮೂಲಕ ದ್ವೇಷ ರಾಜಕೀಯ ಮಾಡಿದ್ದಾರೆ. ಕಾಂಗ್ರೆಸ್ ಆರೋಗ್ಯಕರ ರಾಜಕೀಯ ಮಾಡುತ್ತಿದ್ದರೆ ಬಿಜೆಪಿ ದ್ವೇಷ ರಾಜಕಾರಣದಲ್ಲಿ ನಿರತವಾಗಿದೆ. ಐಟಿ, ಇಡಿ ದಾಳಿ ಮಾಡಿ ಅದರಲ್ಲಿ ಯಶಸ್ಸು ಆಗಿಲ್ಲ ಎಂದು ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಸಣ್ಣ ಸಣ್ಣ ವಿಷಯಕ್ಕೆ ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಶಾಸಕರು ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೃಷ್ಟೀಕರಣ ನೀಡಲಿ. ಈ ಘಟನೆಯ ವಿರುದ್ದ ಕಾಂಗ್ರೆಸ್ ಪಕ್ಷ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದರು.