ಮಂಗಳೂರು: ಮಾತೃಭಾಷೆ ಬರೀ ಭಾಷೆ ಮಾತ್ರವಲ್ಲ; ನಮ್ಮ ಕಲೆ, ನಾಡು-ನುಡಿ, ನೆಲ-ಜಲ ಆ ಭಾಷೆಯೊಳಗೆ ಸಮ್ಮಿಲಿನವಾಗಿರುತ್ತದೆ. ಅಂತಹ ಮಾತೃಭಾಷೆಯನ್ನು ನಾವೆಂದೂ ಮರೆಯಬಾರದು ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದರು.
ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೈಭವದ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾತೃಭಾಷೆಯನ್ನು ಮನಸ್ಸಿನಲ್ಲಿರಿಸಿ ಮಾಡಿದ ಸಿನಿಮಾ ''ಸ.ಹಿ.ಪ್ರಾ.ಶಾಲೆ ಕಾಸರಗೋಡು''. ಕರಾವಳಿಯ ಕಲೆಗಳನ್ನು ನೆನಪಿಸುವಂತಹ ಸೊಬಗನ್ನು ಅದರಲ್ಲಿ ತೋರಿಸಲಾಗಿದೆ. ಅಲ್ಲದೆ ನನ್ನ ಇತರ ಸಿನಿಮಾಗಳಲ್ಲಿಯೂ ನಮ್ಮ ಕಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಕಲೆ, ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ಯಾರು, ನಮ್ಮ ಇತಿಹಾಸವೇನು ಎಂದು ಅರಿಯಲು ಸಾಧ್ಯ ಎಂದರು. ಇನ್ನು ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.