ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ 75ನೇ ಜನ್ಮದಿನ ಹಾಗೂ ವೃತ್ತಿಜೀವನದ 50ರ ಸಂಭ್ರಮದ ಆಚರಣೆಯ ಸಲುವಾಗಿ 'ಅನಂತ ಅಭಿನಂದನೆ' ಕಾರ್ಯಕ್ರಮವು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಭಾನುವಾರ ಸಂಭ್ರಮದಿಂದ ನಡೆಯಿತು. ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಯನ್ನು ಅತಿಥಿಗಳು ಮಲ್ಲಿಗೆ, ಜಾಜಿ ಹೂವಿನ ಮಾಲೆ, ಬೆಳ್ಳಿಯ ವೀಳ್ಯದ ಎಲೆ, ತುಳುನಾಡಿನ ಪರಂಪರೆಯ ಕಂಬಳದ ಬೆತ್ತ, ಪುಷ್ಪವೃಷ್ಟಿ ಸಹಿತ ವಿಶೇಷವಾಗಿ ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅನಂತ್ ನಾಗ್ ದಂಪತಿಯನ್ನು ಡೊಂಗರಕೇರಿ ಕೆನರಾ ಹೈಸ್ಕೂಲ್ನಿಂದ ಟಿ ವಿ ರಮಣ ಪೈ ಸಭಾಂಗಣದವರೆಗೆ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನೆ ಬಳಿಕ ಸಿನಿಮಾ ದಿಗ್ಗಜರು, ಪತ್ರಕರ್ತರು, ಯುವ ಸಮುದಾಯದೊಂದಿಗೆ ಸಂವಹನ ಕಾರ್ಯಕ್ರಮ ನಡೆಯಿತು. ಕಾಸರಗೋಡು ಚಿನ್ನಾ, ಸದಾಶಿವ ಶೆಣೈ, ದಿನೇಶ್ ಮಂಗಳೂರು, ಲಕ್ಷ್ಮಣ ಕುಮಾರ್ ಮಲ್ಲೂರು ಸಂವಾದದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನದ ಬಳಿಕ ಅನಂತ್ ನಾಗ್ ಅವರ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯ ನಡೆಯಿತು.
ಈ ವೇಳೆ ಅನಂತ್ ನಾಗ್ ಮಾತನಾಡಿ, "ನಾನು ಕರಾವಳಿಯಲ್ಲಿ ಬೆಳೆದವ ಎಂಬುದು ಹೆಮ್ಮೆಯ ವಿಚಾರ. ನೂರಾರು ಬಾರಿ ಇಲ್ಲಿಂದ ಓಡಾಡಿದ್ದೇನೆ. ಮಂಗಳಾದೇವಿ ಕೃಪೆಯಿಂದ ಇಂದು ಇಲ್ಲಿ ನನ್ನ ಹುಟ್ಟುಹಬ್ಬ ನೆರವೇರಿದೆ. ಎಲ್ಲಾ ಮಹಾನ್ ವ್ಯಕ್ತಿಗಳ ಜೊತೆಗೆ ನಟನೆ ಮಾಡಿದ್ದೇನೆ. ಗುರುಗಳ ಆಶೀರ್ವಾದದಿಂದ ಇಲ್ಲಿ ಸನ್ಮಾನ ಪಡೆದಿದ್ದು, ಧನ್ಯತಾ ಭಾವನೆ ಮೂಡಿದೆ" ಎಂದ ಅವರು ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡಿನ ಮೂಲಕ ಸಭಿಕರನ್ನು ರಂಜಿಸಿದರು.
ಬಳಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, "ಈ ಸನ್ಮಾನವು ಸಂಸ್ಕೃತಿ ವಿನಿಮಯ ಮೂಲಕ ಎಲ್ಲರಿಗೂ ಪ್ರೇರಣೆ ಕೊಡುವ ಕಾರ್ಯಕ್ರಮ. ಅನಂತ್ ನಾಗ್ ಕಾಲ ನಿರ್ಣಾಯಕರು. ಅವರ ಕಾಲದಲ್ಲಿ ನಾವಿದ್ದೇವೆ ಎಂಬುದು ಹಿರಿಮೆ. ಅನಂತ್ ನಾಗ್ ಕರ್ನಾಟಕದ ಅಮಿತಾಭ್ ಬಚ್ಚನ್" ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಭಾರತ ಕಂಡ ಅದ್ಭುತ ನಾಯಕ ನಟ ಅನಂತ್ ನಾಗ್. ಅವರಲ್ಲಿ ಸರಳ ನಟನೆ ಕಂಡಿದ್ದೇನೆ. ಅವರೊಬ್ಬ ಅಪ್ಪಟ ರಾಷ್ಟ್ರಭಕ್ತ" ಎಂದು ಅಭಿನಂದಿಸಿದರು. ನಂತರ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, "ಇಡೀ ಕುಟುಂಬ ನೋಡುವ ಸಿನಿಮಾ ನೀಡುತ್ತಿದ್ದ ಅನಂತ್ ನಾಗ್ ಅವರ ಕೊಡುಗೆ ಸಮಾಜಕ್ಕೆ ದೊಡ್ಡದಾಗಿದೆ. ಮನಸ್ಸಿನ ದುಗುಡಕ್ಕೆ ಸಿನಿಮಾ ಸಾಂತ್ವನ ನೀಡುತ್ತದೆ. ಹಾಗಾಗಿ ಕಲಾವಿದರ ಶ್ರಮ ಸಾರ್ಥಕ. ಕಲಾವಿದರಾಗಿ ಅನಂತ್ ನಾಗ್ ಹಲವರನ್ನು ಬೆಳೆಸಿದ್ದು, ಅವರ ಮಾರ್ಗದರ್ಶನ ಕಿರಿಯರಿಗೆ ಸಿಗಲಿದೆ" ಎಂದರು.
"ಅನಂತ್ ನಾಗ್ ಅವರ ಚಿತ್ರರಂಗದ 50 ವರ್ಷ ಅಂದರೆ ಮಹಾನ್ ಸಾಧನೆಯಾಗಿದೆ. ಅವರಿಗೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದರೆ, ಪ್ರಶಸ್ತಿಗೆ ಮೌಲ್ಯ ಬರಲಿದೆ" ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದರು. ಈ ವೇಳೆ ಕೆನರಾ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ವಾಸುದೇವ ಕಾಮತ್, ತುಳು ಸಾಂಸ್ಕೃತಿಕ ಪ್ರತಿಷ್ಠಾನದ ಗಿರಿಧರ ಶೆಟ್ಟಿ, ರಂಗ ಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಉಪಸ್ಥಿತರಿದ್ದರು.
ಇದನ್ನೂ ಓದಿ: ಒಂದು ಲಕ್ಷ ಗಿಡ ನೆಡುವ 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ: ಕಿಚ್ಚ ಸುದೀಪ್ ಸಾಥ್